ಉಡುಪಿಯಲ್ಲಿ ಹಲಸು, ಜೇನು ಪ್ರದರ್ಶನ -ಮಾರಾಟ ಮೇಳಕ್ಕೆ ಚಾಲನೆ

ಉಡುಪಿ : ಜಿಲ್ಲಾಡಳಿತ, ಜಿಪಂ ಹಾಗೂ ತೋಟಗಾರಿಕೆ ಇಲಾಖೆ ಗಳ ಸಂಯುಕ್ತ ಆಶ್ರಯದಲ್ಲಿ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಹಲಸು ಹಾಗೂ ಜೇನು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಇಂದು ಚಾಲನೆ ನೀಡಲಾಯಿತು.
ಮೇಳವನ್ನು ಉದ್ಘಾಟಿಸಿದ ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಮಾತನಾಡಿ, ಮಧ್ಯವರ್ತಿ ಗಳಿಂದ ಬೆಳೆಗಾರರಿಗೆ ಲಾಭ ಇಲ್ಲ ಎಂಬ ಆರೋಪ ಕೇಳಿಗಳು ಬರುತ್ತಿದ್ದವು. ಆದರೆ ಇಲ್ಲಿ ಬೆಳೆಗಾರರಿಂದ ನೇರವಾಗಿ ಗ್ರಾಹಕರಿಗೆ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ಬೆಳೆಗಾರರು ಖುಷಿಯಾಗಿದ್ದಾರೆ. ಬೇರೆ ಬೇರೆ ಜಾತಿಯ ಹಲಸನ್ನು ಇಲ್ಲಿ ಮಾರಾಟ ಮಾಡಲಾ ಗುತ್ತಿದೆ. ಅದನ್ನು ಉಡುಪಿ ಜನತೆ ಕೊಂಡು ಬೆಳೆಗಾರರಿಗೆ ಲಾಭ ಮಾಡಿಕೊಡ ಬೇಕು ಎಂದು ತಿಳಿಸಿದರು.
ಉಡುಪಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ಮಾತನಾಡಿ, ಸರಕಾರ ಹಲಸು ಬೆಳೆಗೆ ಪ್ರೋತ್ಸಾಹ ನೀಡಲು ಅನೇಕ ಯೋಜನೆಗಳನ್ನು ರೂಪಿಸಲು ಚಿಂತಿಸಿದೆ. ಅದರ ಭಾಗವಾಗಿ ಹಲಸು ಮೇಳವು ಒಂದಾಗಿದೆ. ಸಾರ್ವಜನಿಕರು ತಮಗೆ ಇಷ್ಠವಾದ ನಮೂನೆಯ ಹಲಸನ್ನು ಮೇಳಗಳಲ್ಲಿ ಕಡಿಮೆ ದರದಲ್ಲಿ ಖರೀದಿಸಬಹುದಾಗಿದೆ. ಈ ಮೇಳವು ೨ ದಿನಗಳ ವರೆಗೆ ನಡೆಯಲಿದ್ದು, ರೈತರು ತಾವು ಬೆಳದ ಹಲಸನ್ನು ನೇರವಾಗಿ ಮಾರಾಟ ಮಾಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಪ್ರಭಾಕರ ಪೂಜಾರಿ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಧನಂಜಯ್, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಭುವನೇಶ್ವರಿ, ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ ಬಿ.ವಿ., ಸಹಾಯಕ ನಿರ್ದೇಶಕರಾದ ನಿದೇಶ್, ಗುರುಪ್ರಪಸಾದ್, ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಮೊದ ಲಾದವರು ಉಪಸ್ಥಿತರಿದ್ದರು.
ಮೇಳದಲ್ಲಿ ಆರು ಟನ್ನಿಗೂ ಅಧಿಕ ಹಲಸು!
ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಬೆಳೆಗಾರರು, ಹಲವು ಜಾತಿಯ ಸುಮಾರು ಆರು ಟನ್‌ಗೂ ಅಧಿಕ ಹಲಸುಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ.
ತೂಬುಗೆರೆಯ ಹಲಸು, ಚೇಳೂರು ಭಾಗದ ಚಂದ್ರ ಹಲಸು ಸೇರಿದಂತೆ ಕೆಂಪು ರುದ್ರಾಕ್ಷಿ ಹಲಸು, ಹಳದಿ ಹಲಸು, ಏಕಾದಶಿ ಹಲಸು, ಶಿವರಾತ್ರಿ ಹಲಸಿನ ಹಣ್ಣುಗಳು ರುಚಿಕರವಾಗಿದ್ದವು. ಜೊತೆಗೆ ಹಲಸಿನ ಹಣ್ಣಿನ ಪದಾರ್ಥ ಗಳಾದ ಹಪ್ಪಳ, ಹೋಳಿಗೆ, ಹಲಸಿನ ಕಡಬು, ಹಲಸಿನ ಕಾಯಿ ಕಬಾಬ್, ಗಟ್ಟಿ, ಸೀರಾ, ಮುಲ್ಕ, ಮಂಚೂರಿ, ಬಜ್ಜಿ, ಚಿಪ್ಸ್, ಹಲಸಿನ ಬೀಜದ ಬಿಸ್ಕೆಟ್, ಹಲಸಿನ ಹಣ್ಣಿನ ಬೀಜದ ಚಪಾತಿ, ಪೌಡರ್ ಮುಂತಾದವುಗಳ ಮಾರಾಟಕ್ಕೆ ಇಡಲಾಗಿದೆ.
ಕಲ್ಪರಸ ಹಾಗೂ ಅದರ ಉತ್ಪನ್ನಗಳು, ಜಿಲ್ಲೆಯ ಅಪರೂಪದ ಬೆಳೆಗಳ ಲ್ಲೊಂದದ ರಂಬೂಟಾನ್ ಹಣ್ಣು, ಜೊತೆಗೆ ಶುದ್ಧ ಜೇನುತುಪ್ಪಕ್ಕೂ ಗ್ರಾಹಕರಿಂದ ಉತ್ತಮ ಬೇಡಿಕೆಗಳು ವ್ಯಕ್ತವಾದವು.