ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ಗೆ ಬಂಧನ ಭೀತಿ
ವಿಚಾರಣೆಗೆ ಗೈರು; ಜಾಮೀನು ರಹಿತ ವಾರಂಟ್ ಹೊರಡಿಸಿದ ಸಿವಿಲ್ ನ್ಯಾಯಾಲಯ

ಡಿ.ಎನ್.ಜೀವರಾಜ್- ಸಿಎಂ ರಾಜಕೀಯ ಕಾರ್ಯದರ್ಶಿ
ಚಿಕ್ಕಮಗಳೂರು, ಜೂ.17: ಪ್ರಕರಣವೊಂದರ ವಿಚಾರಣೆ ಸಂಬಂಧ ನ್ಯಾಯಾಲಯಕ್ಕೆ ಪದೇಪದೇ ಗೈರು ಹಾಜರಾದ ಹಿನ್ನೆಲೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಡಿ.ಎನ್.ಜೀವರಾಜ್ ವಿರುದ್ಧ ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಸಿವಿಲ್ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತನಗೆ ಹಣಕ್ಕೆ ಬೇಡಿಕೆ ಇಟ್ಟು ತನ್ನನ್ನು ಬ್ಲಾಕ್ಮೇಲ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಜೀವರಾಜ್ ಅವರು ಈ ಹಿಂದೆ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಪ್ರಕರಣದ ವಿಚಾರಣೆ ವೇಳೆ ಸಾಕ್ಷಿ ಹೇಳಬೇಕಿದ್ದ ಜೀವರಾಜ್ ನ್ಯಾಯಾಲಯಕ್ಕೆ ಪದೇ ಪದೇ ಗೈರಾಗಿದ್ದರು. 2020ರಿಂದಲೂ ಜೀವರಾಜ್ ನ್ಯಾಯಾಲಯಕ್ಕೆ ಹಾಜರಾಗದೇ ವಿಚಾರಣಗೆ ಗೈರಾಗುತ್ತಿದ್ದರು ಎನ್ನಲಾಗುತ್ತಿದ್ದು, ಈ ಪ್ರಕರಣದ ವಿಚಾರಣೆ ಜೂ.16ರಂದು ಸಿವಿಲ್ ನ್ಯಾಯಾಲಯದಲ್ಲಿದ್ದು, ಈ ವಿಚಾರಣೆಗೂ ಜೀವರಾಜ್ ಹಾಜರಾಗಿರಲಿಲ್ಲ.
ಜೀವರಾಜ್ ಗೈರಿನ ಬಗ್ಗೆ ನ್ಯಾಯಾಧೀಶರು ಪೊಲೀಸರನ್ನು ವಿಚಾರಿಸಿದ ವೇಳೆ, ಜೀವರಾಜ್ ಬೆಂಗಳೂರಿಗೆ ಹೋಗಿರುವುದರಿಂದ ವಿಚಾರಣಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಉತ್ತರಿಸಿದ್ದಾರೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು ಜೀವರಾಜ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿ ಆದೇಶಿಸಿದ ಎಂದು ತಿಳಿದು ಬಂದಿದೆ.
ಜಮೀನು ರಹಿತ ವಾರಂಟ್ ಹಿನ್ನೆಲೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಜೀವರಾಜ್ಗೆ ಬಂಧನದ ಭೀತಿ ಎದುರಾಗಿದ್ದು, ಈ ಪ್ರಕರಣ ಸದ್ಯ ವ್ಯಾಪಕ ಚರ್ಚೆಯೊಂದಿಗೆ ಸಾರ್ವಜನಿಕರ ಕತೂಹಲ್ಲೆ ಕಾರಣವಾಗಿದೆ.







