ಚುನಾವಣೆಯಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸುವುದಕ್ಕೆ ನಿಷೇಧ ವಿಧಿಸಿ
ಕೇಂದ್ರಕ್ಕೆ ಚುನಾವಣಾ ಆಯೋಗ ಆಗ್ರಹ
![ಚುನಾವಣೆಯಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸುವುದಕ್ಕೆ ನಿಷೇಧ ವಿಧಿಸಿ ಚುನಾವಣೆಯಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸುವುದಕ್ಕೆ ನಿಷೇಧ ವಿಧಿಸಿ](https://www.varthabharati.in/sites/default/files/images/articles/2022/06/17/339190-1655488194.jpg)
ಹೊಸದಿಲ್ಲಿ, ಜೂ. 17: ಚುನಾವಣೆಯಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾನಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ನಿಷೇಧ ವಿಧಿಸುವ ಸಲುವಾಗಿ ಕಾನೂನಿನಲ್ಲಿ ತಿದ್ದುಪಡಿ ತರುವಂತೆ ಚುನಾವಣಾ ಆಯೋಗ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.
ಕೇಂದ್ರ ಕಾನೂನು ಸಚಿವಾಲಯದ ಶಾಸಕಾಂಗ ಕಾರ್ಯದರ್ಶಿ ಅವರೊಂದಿಗಿನ ಸಂವಹನದ ಸಂದರ್ಭ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಈ ಮನವಿ ಮಾಡಿದ್ದಾರೆ.
ಚುನಾವಣೆಯಲ್ಲಿ ಅಭ್ಯರ್ಥಿಗೆ ಕೇವಲ ಎರಡು ಸ್ಥಾನಗಳಿಗೆ ಮಾತ್ರ ಸ್ಪರ್ಧಿಸಲು ಅನುವು ಮಾಡಿಕೊಡಲು 1996ರಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಇದಕ್ಕಿಂತ ಮೊದಲು ಅಭ್ಯರ್ಥಿಗಳು ಸ್ಪರ್ಧಿಸಬಹುದಾದ ಸ್ಥಾನಗಳ ಸಂಖ್ಯೆಗೆ ಯಾವುದೇ ಮಿತಿ ಇರಲಿಲ್ಲ.
ಓರ್ವ ಅಭ್ಯರ್ಥಿ ಒಂದು ಬಾರಿಗೆ ಒಂದೇ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ನೀಡುವಂತೆ ಈಗ ಚುನಾವಣಾ ಆಯೋಗ ಕೇಂದ್ರ ಸರಕಾರವನ್ನು ಆಗ್ರಹಿಸಿದೆ. ಇದು ಸಾಧ್ಯವಾಗದೇ ಇದ್ದರೆ, ಈ ಅಭ್ಯಾಸವನ್ನು ತಡೆಯಲು ದಂಡ ವಿಧಿಸಬೇಕು ಎಂದು ಅದು ಹೇಳಿದೆ.
ಓರ್ವ ಅಭ್ಯರ್ಥಿ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿ ಎರಡೂ ಸ್ಥಾನಗಳಲ್ಲಿ ಜಯ ಗಳಿಸಿದಾಗ, ಒಂದು ಸ್ಥಾನವನ್ನು ಬಿಟ್ಟುಕೊಡುವುದು ಕಡ್ಡಾಯವಾಗಿದೆ ಎಂದು ಈ ಬಗ್ಗೆ ಅರಿವಿರುವ ಅನಾಮಿಕ ವ್ಯಕ್ತಿಯೋರ್ವರು ತಿಳಿಸಿದ್ದಾರೆ. ‘‘ಇದರಿಂದ ಅಭ್ಯರ್ಥಿ ತ್ಯಜಿಸುವ ಕ್ಷೇತ್ರದ ಜನರಿಗೆ ಅನ್ಯಾಯವಾಗುತ್ತದೆ’’ ಎಂದು ಅವರು ಹೇಳಿದ್ದಾರೆ.
ಇಂತಹ ಸನ್ನಿವೇಶ ಸರಕಾರದ ಬೊಕ್ಕಸಕ್ಕೆ ಹೊರೆಯನ್ನೂ ಉಂಟು ಮಾಡುತ್ತದೆ. ಇದರಿಂದ ಉಪಚುನಾವಣೆಗೆ ಸಿಬ್ಬಂದಿ ಹಾಗೂ ಇತರ ಸಂಪನ್ಮೂಲಗಳು ಅಗತ್ಯವಾಗುತ್ತವೆ ಎಂದು ಅವರು ತಿಳಿಸಿದ್ದಾರೆ.