ಅಗ್ನಿಪಥ್ ಯೋಜನೆಗೆ ವಿರೋಧ; ಜೂ.20ರಂದು ಖಾನಾಪುರ ಬಂದ್ ಗೆ ನಿರ್ಧಾರ: ಶಾಸಕಿ ಅಂಜಲಿ ನಿಂಬಾಳ್ಕರ್
''ಪ್ರತಿಭಟನೆ ಮಾಡಿದ್ರೆ ದೇಶದ್ರೋಹಿ ಅಂತೀರಾ?''

ಶಾಸಕಿ ಅಂಜಲಿ ನಿಂಬಾಳ್ಕರ್
ಬೆಳಗಾವಿ: ಕೇಂದ್ರ ಸರ್ಕಾರದ 'ಅಗ್ನಿಪಥ್' ಯೋಜನೆ ವಿರೋಧಿಸಿ ಬೆಳಗಾವಿಯಲ್ಲಿ ಖಾನಾಪುರ ಮತ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಸೇನಾ ಆಕಾಂಕ್ಷಿಗಳಾಗಿರುವ ಯುವಕರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ, 'ಅಗ್ನಿಪಥ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿಯಾಗಲು ಬಿಡುವುದಿಲ್ಲ. ಅಗ್ನಿಪಥ್ ಯೋಜನೆಯನ್ನು ಕೇಂದ್ರ ಸರಕಾರ ವಾಪಸ್ ಪಡೆಯುವ ವರೆಗೆ ಹೋರಾಟ ಮುಂದುವರಿಯಲಿದೆ. ಜೂ. 20ಕ್ಕೆ ಖಾನಾಪುರ ಬಂದ್ಗೆ ಮಾಡಿ ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಂಡಿದ್ದು, ಈ ಹುಡುಗರ ಸಹೋದರಿಯಾಗಿ ನಾನು ಈ ಪ್ರತಿಭಟನೆಗೆ ಬಂದಿದ್ದೇನೆ' ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.
'ಸೇನೆಗೆ ಅರ್ಜಿ ಹಾಕಿ ಎಕ್ಸಾಂ ಬರೆದಿರುವ ಯುವಕರನ್ನ ಸೇನೆಗೆ ನೇಮಿಸಿಕೊಂಡಿಲ್ಲ. ಈಗ ಅಗ್ನಿಪಥ್ ಹೆಸರಲ್ಲಿ ಮತ್ತಷ್ಟು ನಿರುದ್ಯೋಗ ಸೃಷ್ಟಿಸಲು ಕೇಂದ್ರ ಹೊರಟಿದೆ. ಅಗ್ನಿಪಥ್ ವಿರೋಧಿಸಿ ಪ್ರತಿಭಟನೆ ಮಾಡಿದ್ರೆ ದೇಶದ್ರೋಹಿ, ಟೆರರಿಸ್ಟ್ ಅಂತೀರಾ?' ಎಂದು ಆಕ್ರೋಶ ವ್ಯಕ್ತಪಡಿಸಿದರು.





