ದ್ವಿತೀಯ ಪಿಯುಸಿ ಫಲಿತಾಂಶ; ಶ್ರಮ ಪಟ್ಟಿದ್ದೆ, ನಿರೀಕ್ಷೆ ಮಾಡಿರಲಿಲ್ಲ: 595 ಅಂಕ ಪಡೆದ ಅನಿಶಾ ಮಲ್ಯ

ಮಂಗಳೂರು : ಉತ್ತಮ ಅಂಕ ಗಳಿಸುವ ನಿಟ್ಟಿನಲ್ಲಿ ನನ್ನೆಲ್ಲಾ ಶ್ರಮಪಟ್ಟಿದ್ದೇನೆ. ಇದೀಗ ನಿರೀಕ್ಷೆಗೂ ಮೀರಿ ಅಂಕ ದೊರಕಿದೆ, ಖುಷಿಯಾಗಿದೆ ಎಂದು ದ್ವಿತೀಯ ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ 595 ಅಂಕಗಳೊಂದಿಗೆ ರಾಜ್ಯದಲ್ಲಿ ದ್ವಿತೀಯ ಸ್ಥಾನ ಹಂಚಿಕೊಂಡಿರುವ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ಅನಿಶಾ ಮಲ್ಯ ಅಭಿಪ್ರಾಯಿಸಿದ್ದಾರೆ.
‘‘ನಾನಿನ್ನೂ ನನ್ನ ಮುಂದಿನ ಗುರಿಯ ಬಗ್ಗೆ ನಿರ್ಧರಿಸಿಲ್ಲ. ಸಿಎ ಮಾಡುವುದಾಗಲಿ ಅಥವಾ ಇತರ ವಿಷಯದಲ್ಲಿ ಮುಂದುವರಿಯುವ ಬಗ್ಗೆಯೂ ಆಲೋಚಿಸಿಲ್ಲ. ಮುಂದೆ ಬಿಕಾಂ ಪದವಿಯನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮಾಡಬೇಕೆಂದಿದ್ದೇನೆ. ಹಂತ ಹಂತವಾಗಿ ಹೆಜ್ಜೆ ಇರಿಸುತ್ತಾ ಸಾಗಬೇಕೆಂದಿರುವೆ’’ ಎಂದು ಅನಿಶಾ ಮಲ್ಯ ಹೇಳಿದ್ದಾರೆ.
‘‘ಆಕೆ ಏನೇ ಆಗಬೇಕಿದ್ದರೂ ಅದು ಅವಳ ಪ್ರಯತ್ನ. ಸಂತ ಅಲೋಶಿಯಸ್ ಕಾಲೇಜು ಉತ್ತಮ ವಾತಾವರಣದೊಂದಿಗೆ ಉತ್ತಮ ಉಪನ್ಯಾಸ ಬಳಗವನ್ನು ಹೊಂದಿದೆ. ಅದರಲ್ಲೂ ನನ್ನ ಮಗಳ ತರಗತಿಯ ಶಿಕ್ಷಕಿಯಾಗಿದ್ದ ಸೌಮ್ಯ ಗಣೇಶ್ ನನ್ನ ಮಗಳ ಪಾಲಿಗೆ ಸಾಕಷ್ಟು ಪ್ರೇರಣೆಯಾಗಿದ್ದಾರೆ. ಮಕ್ಕಳಿಗೆ ಮನೆಯ ಹೊರಗೆ ಅವರು ಕಲಿಯುವ ಶಾಲಾ ಕಾಲೇಜುಗಳೇ ಅವರ ಇನ್ನೊಂದು ಮನೆಯಂತೆ. ಅಲ್ಲಿನ ಶಿಕ್ಷಕ ಸಮೂಹ ಅವರ ಪೋಷಕರ ಜವಾಬ್ಧಾರಿಯನ್ನೂ ವಹಿಸುತ್ತಾರೆ. ನನ್ನ ಮಗಳು ರ‍್ಯಾಂಕ್ ಗಳಿಸುವುದು, ಉತ್ತಮ ಅಂಕ ಗಳಿಸುವುದು ಮಾತ್ರ ಮುಖ್ಯ ಅಲ್ಲ. ಆಕೆ ಉತ್ತಮ ನಾಗರಿಕಳಾಗಿ ಬದುಕಬೇಕೆಂಬುದು ನಮ್ಮ ಆಶಯ’’ ಎಂದು ಅನಿಶಾ ಮಲ್ಯ ತಂದೆ ಪಾಂಡುರಂಗ ಮಲ್ಯ ಅಭಿಪ್ರಾಯಿಸಿದ್ದಾರೆ.







