‘ಸಾಫ್ಟ್‌ವೇರ್ ಇಂಜಿನಿಯರ್ ಆಗುವ ಆಸೆ’ ಪಿಯು ಸೈನ್ಸ್‌ನಲ್ಲಿ 3ನೆ ಸ್ಥಾನ ಪಡೆದ ಉಡುಪಿಯ ಓಂಕಾರ್ ಪ್ರಭು

ಉಡುಪಿ : ಉಡುಪಿ ವಿದ್ಯೋದ್ಯಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಓಂಕಾರ್ ಪ್ರಭು, ಈ ಬಾರಿಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 596 ಅಂಕ ಗಳಿಸುವುದರೊಂದಿಗೆ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಉಡುಪಿ ಕಲ್ಸಂಕ ನಿವಾಸಿ ರಾಮದಾಸ್ ಪ್ರಭು ಹಾಗೂ ಸಂಧ್ಯಾ ಪಾಟೀಲ್ ದಂಪತಿಯ ಪುತ್ರ ಓಂಕಾರ್ ಪ್ರಭು, ರಸಾಯನಶಾಸ್ತ್ರದಲ್ಲಿ ೯೮, ಇಂಗ್ಲಿಷ್‌ನಲ್ಲಿ ೯೮ ಹಾಗೂ ಕಂಪ್ಯೂಟರ್ ಸೈನ್ಸ್, ಗಣಿತ, ಹಿಂದಿ, ಭೌತಶಾಸ್ತ್ರದಲ್ಲಿ ತಲಾ ೧೦೦ ಅಂಕಗಳನ್ನು ಪಡೆದುಕೊಂಡಿದ್ದಾರೆ.
ಇವರ ತಂದೆ ದುಬೈಯಲ್ಲಿ ದುಡಿಯುತ್ತಿದ್ದರೆ, ತಾಯಿ ಮಣಿಪಾಲ ಮಾಧವ ಕೃಪಾ ಶಾಲೆಯ ಇಂಗ್ಲಿಷ್ ಶಿಕ್ಷಕಿಯಾಗಿದ್ದಾರೆ. ಇವರ ಸಹೋದರ ಆವಿಷ್ಕಾರ್ ಪ್ರಭು ಮಾಧವ ಕೃಪಾ ಶಾಲೆಯ ಆರನೇ ತರಗತಿ ವಿದ್ಯಾರ್ಥಿ. ಓಂಕಾರ್ ಬ್ರಹ್ಮಾವರದ ಲಿಟ್ಲ್‌ರಾಕ್ ಶಾಲೆಯಲ್ಲಿ ೧೦ನೆ ತರಗತಿಯಲ್ಲಿ ಶೇ.೯೦.೨ ಅಂಕ ಪಡೆದಿದ್ದರು.
‘ತುಂಬಾ ಖುಷಿ ಆಗುತ್ತಿದೆ. ಪೋಷಕರು ಹಾಗೂ ಉಪನ್ಯಾಸಕರ ಪ್ರೋತ್ಸಾಹ ದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ತಾಯಿ ನನಗೆ ತುಂಬಾ ಪ್ರೋತ್ಸಾಹ ನೀಡಿದರು. ಇದು ನಿರೀಕ್ಷಿತವಾಗಿವೇ ಆಗಿತ್ತು. ನಾನು ಹೆಚ್ಚಾಗಿ ಸಂಜೆಯಿಂದ ರಾತ್ರಿಯವರೆಗೂ ಓದುತ್ತಿದ್ದೆ. ಯಾವುದೇ ಟ್ಯುಷನ್‌ಗೆ ಹೋಗದೆ ಆನ್‌ಲೈನ್ ವಿಡಿಯೋಗಳನ್ನು ನೋಡಿ, ಕಾಲೇಜಿನ ಪುಸ್ತಕಗಳಿಂದಲೇ ಓದಿ ಹೆಚ್ಚಿನ ಅಂಕ ಪಡೆದುಕೊಂಡಿದ್ದೇನೆ’ ಎಂದು ಓಂಕಾರ್ ಪ್ರಭು ಹೇಳಿದರು.
ಮುಂದೆ ನಾನು ಈಗಾಗಲೇ ಸಿಇಟಿ ಪರೀಕ್ಷೆ ಬರೆದಿದ್ದೇನೆ. ಮುಂದೆ ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಪಡೆದು ಸಾಫ್ಟ್‌ವೇರ್ ಇಂಜಿನಿಯರ್ ಆಗಬೇಕೆಂಬುದು ನನ್ನ ಆಸೆಯಾಗಿದೆ. ಅದೇ ರೀತಿ ಜಿಇಇ ಪರೀಕ್ಷೆ ಕೂಡ ಬರೆಯಲಿದ್ದೇನೆ ಎಂದು ಓಂಕಾರ್ ಪ್ರಭು ತಿಳಿಸಿದರು.
"ಮಗನ ಸಾಧನೆ ಬಗ್ಗೆ ನಿರೀಕ್ಷಿಸಿದ್ದೇವು. ಅವನಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಿದ್ದೇವು. ಕಾಲೇಜನ್ನು ತುಂಬಾ ಇಷ್ಟ ಪಡುತ್ತಿದ್ದನು. ಅದರಂತೆ ಕಾಲೇಜಿನ ವಾತಾವರಣಕ್ಕೆ ಒಗ್ಗಿಕೊಂಡಿದ್ದೇನು. ಕೆಲವೊಂದು ವಿಚಾರಗಳನ್ನು ನನ್ನ ಬಳಿ ಕೇಳಿಯೂ ತಿಳಿದುಕೊಳ್ಳುತ್ತಿದ್ದನು"
-ಸಂಧ್ಯಾ ಪಾಟೀಲ್, ಓಂಕಾರ್‌ರ ತಾಯಿ







