ಪಿಯುಸಿ ಫಲಿತಾಂಶ: ಎರಡನೇ ಸ್ಥಾನಕ್ಕೆ ಜಾರಿದ ಉಡುಪಿ

ಭವ್ಯ ನಾಯಕ್, ಓಂಕಾರ್ ಪ್ರಭು
ಉಡುಪಿ : ೨೦೧೯ರಲ್ಲಿ ರಾಜ್ಯಕ್ಕೆ ಅಗ್ರಸ್ಥಾನಿಯಾಗಿದ್ದು, ೨೦೨೦ರಲ್ಲಿ ಅಗ್ರಸ್ಥಾನವನ್ನು ದಕ್ಷಿಣ ಕನ್ನಡದೊಂದಿಗೆ ಹಂಚಿಕೊಂಡಿದ್ದ ಉಡುಪಿ ಜಿಲ್ಲೆ, ಇಂದು ಪ್ರಕಟಗೊಂಡ ೨೦೨೨ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಗ್ರಸ್ಥಾನವನ್ನು ದಕ್ಷಿಣ ಕನ್ನಡಕ್ಕೆ ಬಿಟ್ಟುಕೊಟ್ಟು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.
ಉಡುಪಿ ಜಿಲ್ಲೆ ಈ ಬಾರಿ ಶೇ.೮೬.೩೮ ಉತ್ತೀರ್ಣದ ಫಲಿತಾಂಶದೊಂದಿಗೆ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ಶೇ.೮೮.೦೨ ಫಲಿತಾಂಶದೊಂದಿಗೆ ಅಗ್ರಸ್ಥಾನ ಹೊಂದಿದೆ. ಈ ಬಾರಿ ಪರೀಕ್ಷೆಗೆ ನೊಂದಾಯಿಸಿಕೊಂಡ ೧೪,೫೯೨ ಮಂದಿ ಫ್ರೆಷರ್ ವಿದ್ಯಾರ್ಥಿಗಳಲ್ಲಿ ೧೨,೬೦೪ ಮಂದಿ ಉತ್ತೀರ್ಣರಾಗಿದ್ದಾರೆ.
ರಿಪೀಟರ್ಸ್ ಹಾಗೂ ಖಾಸಗಿ ವಿದ್ಯಾರ್ಥಿಗಳನ್ನು ಗಣನೆಗೆ ತೆಗೆದುಕೊಂಡರೆ ಈ ಬಾರಿ ಉಡುಪಿ ಜಿಲ್ಲೆಯಿಂದ ಒಟ್ಟು ೧೫,೨೬೭ ಮಂದಿ ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡವರಲ್ಲಿ ೧೨,೮೧೭ ಮಂದಿ ಉತ್ತೀರ್ಣರಾಗಿ ಒಟ್ಟಾರೆಯಾಗಿ ಶೇ.೮೩.೯೫ ಫಲಿತಾಂಶ ದಾಖಲಾಗಿದೆ.
ಈ ಫಲಿತಾಂಶದಲ್ಲಿ ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಪಡೆದಿದ್ದಾರೆ. ಪರೀಕ್ಷೆ ಬರೆದ ೭೫೫೨ ಬಾಲಕರಲ್ಲಿ ೬೦೩೮ ಮಂದಿ (ಶೇ.೭೯.೯೫) ತೇರ್ಗಡೆ ಗೊಂಡರೆ, ೭೭೧೫ ವಿದ್ಯಾರ್ಥಿನಿಯರಲ್ಲಿ ೬೭೭೯ (ಶೇ.೮೭.೮೭) ಮಂದಿ ತೇರ್ಗಡೆಗೊಂಡಿದ್ದಾರೆ. ನಗರ ಪ್ರದೇಶದ ಶೇ.೮೫.೪೨ರಷ್ಟು ಹಾಗೂ ಗ್ರಾಮೀಣ ಭಾಗದ ಶೇ.೮೨.೩೭ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಭಾಗವಾರು ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ.೮೯.೯೬ರಷ್ಟು ಮಂದಿ, ಕಾಮರ್ಸ್ ವಿಭಾಗದಲ್ಲಿ ಶೇ.೮೬.೬೩ರಷ್ಟು ಮಂದಿ ಹಾಗೂ ಕಲಾ ವಿಭಾಗದಲ್ಲಿ ಶೇ.೭೧.೭೪ರಷ್ಟು ಮಂದಿ ಈ ಬಾರಿ ಉತ್ತೀರ್ಣ ಗೊಂಡಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಬರೆದು ಶೇ.೬೮.೩೪ರಷ್ಟು ಮಂದಿ ಪಾಸಾದರೆ, ಇಂಗ್ಲೀಷ್ ಮಾಧ್ಯಮದಲ್ಲಿ ಬರೆದ ಶೇ.೮೭.೫೩ರಷ್ಟು ಮಂದಿ ತೇರ್ಗಡೆ ಹೊಂದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ೫೨೯೧ ಮಂದಿ ಪರೀಕ್ಷೆ ಬರೆದಿದ್ದು ಇವರಲ್ಲಿ ೪೭೬೦ ಮಂದಿ ತೇರ್ಗಡೆಗೊಂಡಿದ್ದಾರೆ. ೨೫೧೦ ಮಂದಿ ಬಾಲಕರಲ್ಲಿ ೨೨೩೭ (ಶೇ.೮೯.೧೨) ಮಂದಿ ಹಾಗೂ ೨೮೩೬ ಬಾಲಕಿಯರಲ್ಲಿ ೨೫೩೬ (ಶೇ.೮೯.೪೨) ಮಂದಿ ತೇರ್ಗಡೆಗೊಂಡಿದ್ದಾರೆ. ಕಾಮರ್ಸ್ ವಿಭಾಗದಲ್ಲಿ ೭೮೬೮ ಮಂದಿ ಪರೀಕ್ಷೆಗೆ ಹಾಜರಾಗಿ ೬೮೧೬ ಮಂದಿ ಉತ್ತೀರ್ಣರಾಗಿದ್ದಾರೆ. ೪೨೦೦ ಬಾಲಕರಲ್ಲಿ ೩೨೯೮ ಮಂದಿ (ಶೇ.೭೮.೫೨), ೪೦೪೧ ಬಾಲಕಿಯರಲ್ಲಿ ೩೬೩೨ ಮಂದಿ (ಶೇ.೮೯.೮೮) ಮಂದಿ ಪಾಸಾಗಿದ್ದಾರೆ.
ಕಲಾ ವಿಭಾಗದಲ್ಲಿ ಜಿಲ್ಲೆಯಲ್ಲಿ ೧೪೩೩ ಮಂದಿ ಪರೀಕ್ಷೆಗೆ ಹಾಜರಾಗಿ ೧೦೨೮ ಮಂದಿ ಪಾಸಾಗಿದ್ದಾರೆ. ಪರೀಕ್ಷೆ ಬರೆದ ೮೪೨ ಬಾಲಕರಲ್ಲಿ ೫೦೩ ಮಂದಿ (ಶೇ.೫೯.೭೪) ಹಾಗೂ ೮೩೮ ಮಂದಿ ಬಾಲಕಿಯರಲ್ಲಿ ೬೧೧ ಮಂದಿ (ಶೇ.೭೨.೯೧) ತೇರ್ಗಡೆಗೊಂಡಿದ್ದಾರೆ. ಈ ಬಾರಿಯ ವೈಶಿಷ್ಟ್ಯವೆಂದರೆ ಜಿಲ್ಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಯಾರೊಬ್ಬರೂ ಕನ್ನಡದಲ್ಲಿ ಪರೀಕ್ಷೆ ಬರೆದಿಲ್ಲ.
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಶೇ.೭೪.೪೭ ರಷ್ಟು ಹಾಗೂ ಪರಿಶಿಷ್ಟ ಪಂಗಡ ಶೇ.೭೭.೬೮ರಷ್ಟು ಮಂದಿ ತೇರ್ಗಡೆಗೊಂಡಿದ್ದಾರೆ. ಪ.ಜಾತಿಯ ೧೦೩೦ ಮಂದಿಯಲ್ಲಿ ೭೬೭ ಹಾಗೂ ಪ.ಪಂಗಡದ ೬೭೨ ಮಂದಿಯಲ್ಲಿ ೫೨೨ ಮಂದಿ ತೇರ್ಗಡೆಗೊಂಡಿದ್ದಾರೆ.
ವಿಜ್ಞಾನದಲ್ಲಿ ೨,೩ನೇ ಸ್ಥಾನ: ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು ಪ್ರಕಟಿಸಿದ ಫಲಿತಾಂಶದಲ್ಲಿ ಉಡುಪಿಯ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಭವ್ಯ ನಾಯಕ್ ೫೯೭ ಅಂಕಗಳನ್ನು ಪಡೆದು ರಾಜ್ಯದ ಮೂವರೊಂದಿಗೆ ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದರೆ, ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಓಂಕಾರ್ ಪ್ರಭು ಅವರು ೫೯೬ ಅಂಕಗಳನ್ನು ಗಳಿಸುವ ಮೂಲಕ ವಿಜ್ಞಾನ ವಿಭಾಗದಲ್ಲಿ ಮೂರನೇ ಸ್ಥಾನವನ್ನು ಏಳು ಮಂದಿಯೊಂದಿಗೆ ಹಂಚಿಕೊಂಡಿದ್ದಾರೆ.
ಮಿಯಾರು ಮೊರಾರ್ಜಿ ದೇಸಾಯಿ ಶೇ.೧೦೦: ಈವರೆಗೆ ಇಲಾಖೆಗೆ ಬಂದಿರುವ ಮಾಹಿತಿಯಂತೆ ಜಿಲ್ಲೆಯಲ್ಲಿ ಕಾರ್ಕಳ ತಾಲೂಕು ಮಿಯಾರಿನ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ಮಾತ್ರ ಶೇ.೧೦೦ ಫಲಿತಾಂಶವನ್ನು ದಾಖಲಿಸಿದೆ. ಉಳಿದಂತೆ ಅನುದಾನಿತ ಹಾಗೂ ಅನುದಾನ ರಹಿತ ಯಾವುದೇ ಕಾಲೇಜುಗಳಿಂದ ಈ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಡಿಡಿಪಿಯು ಮಾರುತಿ ತಿಳಿಸಿದ್ದಾರೆ. ಆಯಾ ಕಾಲೇಜುಗಳಲ್ಲಿ ನಾಳೆ ಬೆಳಗ್ಗೆ ಅಧಿಕೃತ ಫಲಿತಾಂಶ ಪ್ರಕಟಗೊಂಡ ಬಳಿಕವಷ್ಟೇ ಜಿಲ್ಲೆಯ ಫಲಿತಾಂಶದ ಸ್ಪಷ್ಟ ಚಿತ್ರಣ ದೊರಕಲಿದೆ ಎಂದು ಮೂಲ ಹೇಳಿವೆ.
ಕೋವಿಡ್ನಿಂದ ಸ್ವಲ್ಪ ಹಿನ್ನಡೆ
"೨೦೧೯, ೨೦೨೦ರಲ್ಲಿ ಅಗ್ರಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಈ ಬಾರಿ ಎರಡನೇ ಸ್ಥಾನಕ್ಕೆ ಇಳಿದ ಬಗ್ಗೆ ಬೇಸರವಿದೆ. ಎಂದಿನಂತೆ ನಾವೆಲ್ಲರೂ ಪ್ರಾಮಾಣಿಕವಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ. ಕೋವಿಡ್ನಿಂದಾಗಿ ನಮ್ಮ ಜಿಲ್ಲೆಯಲ್ಲಿ ಉಳಿದ ಕಡೆಗಿಂತ ಒಂದು ತಿಂಗಳು ತಡವಾಗಿ ಆಪ್ಲೈನ್ ಕಾಸ್ಗಳು ಪ್ರಾರಂಭಗೊಂಡವು. ಇದರ ನಂತರ ಜಿಲ್ಲೆಯಲ್ಲಿ ಕಾಣಿಸಿಕೊಂಡ ಹಿಜಾಬ್ ವಿವಾದ ಸ್ವಲ್ಪ ಮಟ್ಟಿನ ಹಿನ್ನಡೆಗೆ ಕಾರಣವಾಗಿರಬಹುದು. ಆದರೂ ನಮ್ಮೆಲ್ಲಾ ಶಿಕ್ಷಕರು ಹೆಚ್ಚಿನ ಶ್ರಮ ಹಾಕಿ ಪಾಠ ಮಾಡಿದ್ದಾರೆ".
-ಮಾರುತಿ, ಡಿಡಿಪಿಯು.







