‘777 ಚಾರ್ಲಿ' ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿದ ರಾಜ್ಯ ಸರಕಾರ

ಚಾರ್ಲಿ ಚಿತ್ರದ ಪೋಸ್ಟರ್- photo credit-@rakshitshetty
ಬೆಂಗಳೂರು, ಜೂ. 18: ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ' ಸಿನಿಮಾಕ್ಕೆ ನಾಳೆ(ಜೂ.19)ಯಿಂದ ಆರು ತಿಂಗಳ ಅವಧಿಗೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ(ಎಸ್ಜಿಎಸ್ಪಿ) ವಿನಾಯಿತಿ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಪ್ರದರ್ಶಕರು ಸಿನಿಮಾ ಟಿಕೆಟ್ ಮೇಲೆ ಎಸ್ಜಿಎಸ್ಟಿ ವಿಧಿಸುವಂತಿಲ್ಲ. 777 ಚಾರ್ಲಿ ಸಿನಿಮಾ ಪ್ರದರ್ಶನದ ಟಿಕೆಟ್ ಮೇಲೆ ರಾಜ್ಯ ಸರಕಾರದ ಆದೇಶದನ್ವಯ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್ಜಿಎಸ್ಟಿ) ಸಂಗ್ರಹಿಸುವುದಿಲ್ಲ ಎಂದು ಪ್ರಮುಖವಾಗಿ ಎದ್ದು ಕಾಣುವಂತೆ ಮುದ್ರಿಸತಕ್ಕದ್ದು ಎಂದು ಆದೇಶದಲ್ಲಿ ಸೂಚನೆ ನೀಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಚಿತ್ರ ವೀಕ್ಷಣೆ ಮಾಡಿ ತಮ್ಮ ಮುದ್ದಿನ ಶ್ವಾನವನ್ನು ನೆನೆದು ಕಣ್ಣೀರಿಟ್ಟಿದ್ದರು. ಚಿತ್ರ ತಂಡ ಮೇಲ್ಕಂಡ ಚಿತ್ರಕ್ಕೆ ಶೇ.100ರಷ್ಟು ತೆರಿಗೆ ವಿನಾಯಿತಿ ಕಲ್ಪಿಸಲು ಸಿಎಂಗೆ ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಶ್ವಾನಗಳ ಸ್ವಾಸ್ಥ್ಯದ ಮೇಲಾಗುವ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಪ್ರಾಣಿ ಹಿಂಸೆಯ ಸೂಕ್ಷ್ಮತೆಗಳನ್ನು ಎತ್ತಿ ಹಿಡಿಯುವ ಆಶಯವನ್ನು ಈ ಚಿತ್ರದ ಕಥಾಹಂದರ ಒಳಗೊಂಡಿದೆ ಎಂದು ಉಲ್ಲೇಖಿಸಲಾಗಿದೆ.







