ಉಡುಪಿ: ಜೀವ ಬೆದರಿಕೆಯೊಡ್ಡಿದ ಆರೋಪಿಗಳಿಗೆ ಜೈಲು ಶಿಕ್ಷೆ, ದಂಡ

ಉಡುಪಿ, ಜೂ.೧೮: ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿದ ಆರೋಪಿಗಳಿಗೆ ನಗರದ ೧ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
೨೦೧೫ರ ಜೂನ್ ೨೪ರಂದು ಬೆಳಗ್ಗೆ ೧೧ ಗಂಟೆಯ ಸುಮಾರಿಗೆ ವಾರಂಬಳ್ಳಿ ಯ ಶಂಕರ್ ಪೂಜಾರಿ ಬಿ.ಎಸ್, ಕುಕ್ಕೆಹಳ್ಳಿಯ ಸುನೀಲ್ ಶೆಟ್ಟಿ, ಹೇರೂರು ಗ್ರಾಮದ ರಿತೇಶ್ ಕುಂದರ್, ಪೆರ್ಡೂರಿನ ಸುರೇಶ್ ಶೆಟ್ಟಿ ಹಾಗೂ ಹಾವಂಜೆಯ ಅಜಿತ್ ಶೆಟ್ಟಿ ಇವರುಗಳು ಉಡುಪಿ ತಾಲೂಕು ಹೇರೂರು ಗ್ರಾಮದ ನಿವಾಸಿ ರಾಮದಾಸ್ ಹೆಗ್ಡೆ ಎಂಬವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಬ್ರಹ್ಮಾವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ೧ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಅವರು ೫ ಜನ ಆರೋಪಿಗಳಿಗೆ ೨ ವರ್ಷ ಕಾರಾಗೃಹ ವಾಸ ಶಿಕ್ಷೆ ಹಾಗೂ ೧೦,೦೦೦ ರೂ. ದಂಡ ವಿಧಿಸಿ, ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮೋಹಿನಿ ಕೆ ವಾದ ಮಂಡಿಸಿದ್ದರು.





