ಉಡುಪಿ ಜಿಲ್ಲೆಯ ಆರು ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆ
ಉಡುಪಿ, ಮೇ ೧೮: ಜಿಲ್ಲೆಯಲ್ಲಿ ಶುಕ್ರವಾರ ಆರು ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿರುವ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ ೧೪ಕ್ಕೇರಿದೆ.
ದಿನದಲ್ಲಿ ಇಬ್ಬರು ಪುರುಷರು ಹಾಗೂ ನಾಲ್ವರು ಮಹಿಳೆಯರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಇವರಲ್ಲಿ ನಾಲ್ವರು ಉಡುಪಿ ತಾಲೂಕಿನವರಾದರೆ ಉಳಿದಿಬ್ಬರು ಕುಂದಾಪುರ ತಾಲೂಕಿನವರು. ಇವರಲ್ಲಿ ಒಬ್ಬರು ಕೋವಿಡ್ ಆಸ್ಪತ್ರೆಗೆ ದಾಖಲಾದರೆ, ಉಳಿದವರೆಲ್ಲರೂ ತಮ್ಮ ಮನೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇಂದು ಒಬ್ಬರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಇಂದು ಒಟ್ಟು ೨೭೫ ಮಂದಿಯನ್ನು ಕೋವಿಡ್ ಪರೀಕ್ಷೆ ಗೊಳಪಡಿಸಲಾಗಿದ್ದು, ಉಡುಪಿ ತಾಲೂಕಿನ ೧೯೬ ಮಂದಿಯಲ್ಲಿ ನಾಲ್ವರು ಪಾಸಿಟಿವ್ ಬಂದಿದ್ದರೆ ಕುಂದಾಪುರ ತಾಲೂಕಿನ ೪೩ ಮಂದಿಯಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಕಾರ್ಕಳ ತಾಲೂಕಿನ ೩೬ ಮಂದಿಯಲ್ಲಿ ಯಾರಲ್ಲೂ ಸೋಂಕು ಕಂಡುಬಂದಿಲ್ಲ.
೩೩೯ ಮಕ್ಕಳಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು ೬೧೦ ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ ೩೩೯ ಮಂದಿ ೧೨ರಿಂದ ೧೪ ವರ್ಷದೊಳಗಿನ ಮಕ್ಕಳೂ ಸೇರಿದ್ದಾರೆ. ೯೮ ಮಕ್ಕಳಿಗೆ ಮೊದಲ ಡೋಸ್ ನೀಡಿದ್ದರೆ, ೨೪೧ ಮಂದಿ ಮಕ್ಕಳು ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ೧೫ರಿಂದ ೧೮ ವರ್ಷದೊಳಗಿನ ೪೯,೧೮೬ ಮಂದಿ ಈಗಾಗಲೇ ಮೊದಲ ಡೋಸ್ ಪಡೆದಿದ್ದರೆ, ೪೭,೯೦೬ ಮಂದಿ ಎರಡನೇ ಡೋಸ್ ಲಸಿಕೆಯನ್ನು ತೆಗೆದುಕೊಂಡಿದ್ದಾರೆ. ಇಂದು ೧೫೪ ಮಂದಿ ಸೇರಿದಂತೆ ೬೦ ವರ್ಷ ಮೇಲಿನ ೬೨,೩೮೮ ಮಂದಿ ಹಿರಿಯ ನಾಗರಿಕರು ಸಹ ಮುನ್ನೆಚ್ಚರಿಕೆ ಲಸಿಕೆಯನ್ನು ಪಡೆದಿದ್ದಾರೆ.







