ಫ್ಯಾಕ್ಟರಿ ಕೆಲಸಕ್ಕೆ ಹೋಗಿದ್ದ ವ್ಯಕ್ತಿ ಕಾಣೆ
ಮಂಗಳೂರು : ನಗರದ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮುಹಮ್ಮದ್ ಅಶ್ಫಾಕ್ (೪೨) ಎಂಬವರು ಜೂ.೧೪ರಿಂದ ಕಾಣೆಯಾದ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂ.೧೪ರಂದು ಬೆಳಗ್ಗೆ ೯:೩೦ಕ್ಕೆ ತೊಕ್ಕೊಟ್ಟಿನಲ್ಲಿರುವ ಫ್ಯಾಕ್ಟರಿಗೆ ಕೆಲಸಕ್ಕೆಂದು ಮನೆಯಲ್ಲಿ ತಿಳಿಸಿ ಹೋದವರು ರಾತ್ರಿಯಾದರೂ ಮರಳಿ ಬರಲಿಲ್ಲ. ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಆಗಿತ್ತು. ಹಾಗಾಗಿ ಸಂಬಂಧಿ ಕರು, ಪರಿಚಿತರ ಬಳಿ ವಿಚಾರಿಸಿದಾಗಲೂ ಯಾವುದೇ ಮಾಹಿತಿ ಸಿಗಲಿಲ್ಲ ಎಂದು ಮುಹಮ್ಮದ್ ಅಶ್ಫಾಕ್‌ರ ಪತ್ನಿ ಅಫ್ರೀನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅವರು ಎಲ್ಲಿಗೆ ಹೋದರೂ ರಾತ್ರಿ ಮನೆಗೆ ಮರಳಿ ಬರುತ್ತಿದ್ದರು. ಹೇಳದೆ ಎಲ್ಲಿಗೂ ಹೋಗುತ್ತಿರಲಿಲ್ಲ ವ್ಯವಹಾರದ ಬಗ್ಗೆ ಹೋದಾಗ ಉಳಕೊಳ್ಳಬೇಕಾದರೆ ತನಗೆ ತಪ್ಪದೆ ಹೇಳುತ್ತಿದ್ದರು. ಅಲ್ಲದೆ ಅವರ ತಾಯಿಗೆ ದಿನಕ್ಕೆ ೨-೩ ಬಾರಿ ಪೋನ್ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದರು. ಜೂ.೧೩ರಂದು ಬೆಳಗ್ಗೆ ಕೊನೆಯದಾಗಿ ಅವರ ತಾಯಿಗೆ ಪೋನ್ ಮಾಡಿ, ನನ್ನ ಮೊಬೈಲ್ ಪೋನ್ ಸರಿ ಇಲ್ಲ ರಿಪೇರಿ ಮಾಡಿದ ನಂತರ ನಿಮ್ಮಲ್ಲಿ ಮಾತನಾಡುತ್ತೇನೆ ಎಂದಿದ್ದರು. ವ್ಯವಹಾರದ ವಿಷಯದಲ್ಲಿ ಬೇಸರಗೊಂಡು ಹೋಗಿರಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.
೫.೫ ಅಡಿ ಎತ್ತರದ, ಗೋಧಿ ಮೈಬಣ್ಣದ, ಸಾಧಾರಣ ಶರೀರದ, ಜೀನ್ ಪ್ಯಾಂಟ್ ಹಾಗೂ ಗ್ರೇ-ಬ್ಲೂ ಬಣ್ಣದ ತುಂಬು ತೋಳಿನ ಅಂಗಿ ಧರಿಸಿದ್ದ ಮುಹಮ್ಮದ್ ಅಶ್ಫಾಕ್ ಮಲಯಾಳಂ, ಕನ್ನಡ, ತುಳು, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳನ್ನು ಮಾತನಾಡುತ್ತಾರೆ. ಇವರನ್ನು ಯಾರಾದರು ಕಂಡಲ್ಲಿ ಪೊಲೀಸ್ ಕಂಟ್ರೋಲ್ ರೂಂ: ೦೮೨೪-೨೨೨೦೮೦೦/ಪೊಲೀಸ್ ಠಾಣೆ ೦೮೨೪-೨೨೨೦೫೧೮ನ್ನು ಸಂಪರ್ಕಿಸಲು ಪಾಂಡೇಶ್ವರ ಪೊಲೀಸರು ಮನವಿ ಮಾಡಿದ್ದಾರೆ.