ಈಕೆಯ ಸಾಧನೆಗೆ ಅಡ್ಡಿಯಾಗದ ಅಂಧತ್ವ; ಐಎಎಸ್ ಅಧಿಕಾರಿ ಆಗುವಾಸೆ ಅಪೂರ್ವಗೆ
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 561 ಅಂಕ

ಮಂಗಳೂರು, ಜೂ.18: ಈಕೆ ಹೆಸರು ಅಪೂರ್ವ. ಹೊರ ಜಗತ್ತು ಈಕೆಯ ಪಾಲಿಗೆ ಕತ್ತಲಾಗಿದ್ದರೂ ಈಕೆಯ ಸಾಧನೆಗೆ ಆ ಕತ್ತಲು ಅಡ್ಡಿಯಾಗಿಲ್ಲ. ದ್ವಿತೀಯ ಪಿಯುಸಿಯ ಕಲಾ ವಿಭಾಗಲ್ಲಿ ಈಕೆ 561 ಅಂಕ ಗಳಿಸಿದ್ದಾರೆ. ಆದರೆ ಇನ್ನೂ ಹೆಚ್ಚಿನ ಅಂಕಗಳ ನಿರೀಕ್ಷೆಯಲ್ಲಿದ್ದ ಈಕೆ ಮರು ಮೌಲ್ಯಮಾಪನದ ನಿರ್ಧಾರ ಮಾಡಿದ್ದರೆ.
ಬೆಳಗಾಂನ ಕಾಗ್ವಾಡ್ ತಾಲೂಕಿನ ಮೋಳೆ ಗ್ರಾಮದ ಅಪೂರ್ವ ನಗರದ ಸೈಂಟ್ ಆ್ಯಗ್ನೆಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ. ಬ್ರೈಲ್ ಲಿಪಿಯಲ್ಲೇ ಅಭ್ಯಾಸ ಮಾಡಿ ಪರೀಕ್ಷೆ ಬರೆದಿದ್ದಾರೆ. ಅಪೂರ್ವಳ ತಂದೆ ಬಾಹುಬಲಿ ಟೊಪಗಿ ಕೃಷಿಕ. ತಾಯಿ ರೋಹಿಣಿ ಟೊಪಗಿ ಶಿಕ್ಷಕಿ. ಇವರ ಮೂವರು ಮಕ್ಕಳು ಕೂಡ ಅಂಧರು. ಅಪೂರ್ವಳ ಸಹೋದರಿ ಬಿಎಡ್ ಹಾಗೂ ಸಹೋದರ ಬಿಎ ಓದುತ್ತಿದ್ದಾರೆ.
ಐಎಎಸ್ ಅಧಿಕಾರಿ ಆಗುವಾಸೆ
‘ನನಗೆ ಐಎಎಸ್ ಅಧಿಕಾರಿಯಾಗಬೇಕೆಂಬ ಆಸೆ ಇದೆ. ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಬಿ.ಎ ಮಾಡಲಿದ್ದೇನೆ’ ಎಂದು ಹೇಳಿದ್ದಾರೆ. ಕನಿಷ್ಠ 580 ಅಂಕಗಳ ನಿರೀಕ್ಷೆ ಇತ್ತು. ಹಾಗಾಗಿ ಮರುಮೌಲ್ಯಮಾಪನಕ್ಕೆ ಹಾಕಲಿದ್ದೇನೆ.
ಪಾಠವನ್ನು ಸರಿಯಾಗಿ ಓದುತ್ತಿದ್ದೆ. ಸಂದೇಹವಿದ್ದರೆ ಶಿಕ್ಷಕರಲ್ಲಿ ಕೇಳಿ ಪರಿಹರಿಸಿಕೊಳ್ಳುತ್ತಿದ್ದೆ. ಪೋಷಕರು ನನಗೆ ತುಂಬಾ ಪ್ರೋತ್ಸಾಹ ನೀಡಿದ್ದಾರೆ ಎಂದು ಅಪೂರ್ವ ಹೇಳಿದ್ದಾರೆ.
ಮಗಳ ಸಾಧನೆಯಿಂದ ತುಂಬಾ ಖುಷಿಯಾಗಿದೆ. ಆಡಿಯೋ ಮೂಲಕ ಗಮನವಿಟ್ಟು ಅಧ್ಯಯನ ಮಾಡುತ್ತಿದ್ದಳು ಎಂದು ಅಪೂರ್ವಳ ತಾಯಿ ರೋಹಿಣಿ ಟೊಪಗಿ ಅಭಿಪ್ರಾಯಿಸಿದ್ದಾರೆ.
ಬಾಲ್ಯದಿಂದ ನನಗೆ ಉಪನ್ಯಾಸಕಿ ಆಗಬೇಕೆಂಬ ಹಂಬಲ ಇತ್ತು. ಹೈಸ್ಕೂಲ್ ನಿಂದ ನನ್ನಲ್ಲಿನ ನಾಯಕತ್ವ ಗುಣ ನಾನು ಯುಪಿಎಸ್ ಸಿ ಪರೀಕ್ಷೆ ಬರೆಯಬೇಕು, ಐಎಎಸ್ ಆಗಬೇಕೆಂಬ ಇರಾದೆಯನ್ನು ಮೂಡಿಸಿದೆ. ನಾನು ಕಲಿತ ಶಾಲಾ ಕಾಲೇಜು ಸಹಪಾಠಿಗಳು, ಅಲ್ಲಿನ ವಾತಾವರಣ ನನ್ನಲಿ ಎಂದೂ ನಾನು ಇತರ ವಿದ್ಯಾರ್ಥಿಗಳಿಗಿಂತ ಭಿನ್ನ ಅಂತ ಮನೋಭಾವವೇ ಮೂಡಿಸಿಲ್ಲ. ನನ್ನ ಕಾಲೇಜಿನ ಉಪನ್ಯಾಸಕರಂತೂ ನನ್ನ ಕಲಿಕೆಗೆ ಎಲ್ಲಾ ರೀತಿಯ ಸಹಕಾರ, ಪ್ರೋತ್ಸಾಹ ನೀಡಿದ್ದಾರೆ ಎಂದು ಮಂಗಳೂರಿನಲ್ಲಿ ಹಾಸ್ಟೆಲ್ ನಲ್ಲಿದ್ದು ಪಿಯುಸಿ ಕಲಿತಿರುವ ಅಪೂರ್ವ ಅಭಿಪ್ರಾಯಿಸಿದ್ದಾರೆ.







