ಡಾ.ಬಿ.ಆರ್.ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ಸಂಸ್ಥಾಪಕ ಎಲ್. ಶಿವಲಿಂಗಯ್ಯ ನಿಧನ

ಎಲ್.ಶಿವಲಿಂಗಯ್ಯ
ಬೆಂಗಳೂರು, ಜೂ. 18: ಡಾ. ಬಿ.ಆರ್. ಅಂಬೇಡ್ಕರ್ ವೈದ್ಯಕೀಯ ಕಾಲೇಜು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರೂ ಹಾಗೂ ರಾಜ್ಯ ಸರಕಾರದ ನಿವೃತ್ತ ಮುಖ್ಯ ಇಂಜಿನಿಯರ್ ಎಲ್.ಶಿವಲಿಂಗಯ್ಯ ಅವರು ನಿಧನರಾಗಿದ್ದಾರೆ.
ಶ್ರೀಯುತರಿಗೆ ಪತ್ನಿ ತೇಜಾವತಿ, ಪುತ್ರರಾದ ಶಿವಪ್ರಕಾಶ್ ಹಾಗೂ ರಮೇಶ್ ಸಹಿತ ಬಂಧುಮಿತ್ರರು ಹಾಗೂ ಒಡನಾಡಿಗಳನ್ನು ಅಗಲಿದ್ದಾರೆ
ಅವರಿಗೆ ಸುಮಾರು 92 ವರ್ಷ ವಯಸ್ಸಾಗಿತ್ತು. ಶನಿವಾರ ಮಧ್ಯಾಹ್ನ ಹಠಾತ್ ಹೃದಯಾಘಾತವಾಗಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆಂದು ಗೊತ್ತಾಗಿದೆ.
ಮಂಡ್ಯ ಜಿಲ್ಲೆಯ ಅದೇ ತಾಲೂಕಿನ ಸೂನಗಹಳ್ಳಿ ಮೂಲದ ಶಿವಲಿಂಗಯ್ಯನವರು ಸಂವಿಧಾನ ಶಿಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅತ್ಯಂತ ಸಮೀಪದಿಂದ ಬಲ್ಲವರಾಗಿದ್ದರು.
ಅಂಬೇಡ್ಕರ್ ಮತ್ತು ಬುದ್ದನ ತತ್ವಗಳ ಪ್ರೇರಣೆಯಿಂದ ಬಡ ಶೋಷಿತರ ಶೈಕ್ಷಣಿಕ ಏಳ್ಗೆಗಾಗಿ ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜ ಸೇವೆಯಲ್ಲಿ ತೊಡಗುದ್ದರು.
ಇಲ್ಲಿನ ಸದಾಶಿವನಗರದ ಅವರ ನಿವಾಸದಲ್ಲಿ ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದೆ. ನಾಳೆ(ಜೂ.19) ಸಂಜೆ 5 ಗಂಟೆಗೆ ಉತ್ತರಹಳ್ಳಿಯ ಚನ್ನಸಂದ್ರ ಕಲಾ ಫಾರಂನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.







