ರಾಷ್ಟ್ರಪತಿಗಳ ಚುನಾವಣೆಗೆ ಅಧಿಸೂಚನೆ ಪ್ರಕಟ; ಜೂ.29ರೊಳಗೆ ನಾಮಪತ್ರ ಸಲ್ಲಿಕೆಗೆ ಅವಕಾಶ
ಮಂಗಳೂರು : ದೇಶದ ರಾಷ್ಟ್ರಪತಿ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಪ್ರಕಟಿಸಿದೆ. ರಾಜ್ಯಸಭೆಯ ಸೆಕ್ರೆಟರಿ ಜನರಲ್ ಹಾಗೂ ೨೦೨೨ರ ಭಾರತದ ರಾಷ್ಟ್ರಪತಿಗಳ ಅಧಿಕಾರ ಪದದ ಚುನಾವಣಾಧಿ ಕಾರಿ ಪಿ.ಸಿ.ಮೋಡಿ, ಕೊಠಡಿ ಸಂಖ್ಯೆ-೨೯, ನೆಲ ಅಂತಸ್ತು, ಸಂಸತ್ ಭವನ, ಹೊಸದಿಲ್ಲಿ ಈ ಕಚೇರಿಯಲ್ಲಿ ಅಥವಾ ಅವರು ಅನಿವಾರ್ಯವಾಗಿ ಗೈರು ಹಾಜರಾಗಿದ್ದರೆ ಸಹಾಯಕ ಚುನಾವಣಾಧಿಕಾರಿಯಾಗಿರುವ ವಿಶೇಷ ಕರ್ತವ್ಯಾಧಿಕಾರಿ (ಒಎಸ್‌ಡಿ) ಮುಕುಲ್ ಪಾಂಡೆ ಅಥವಾ ರಾಜ್ಯ ಸಭಾ ಸಚಿವಾಲಯದ ಮುಖ್ಯ ಜಾಗೃತಿ ಅಧಿಕಾರಿ ಹಾಗೂ ಜಂಟಿ ಕಾರ್ಯದರ್ಶಿ ಸುರೇಂದ್ರ ಕುಮಾರ್ ತ್ರಿಪಾಠಿ ಅವರಿಗೆ ಸಾರ್ವಜನಿಕ ರಜಾ ದಿನಗಳನ್ನು ಹೊರತು ಪಡಿಸಿ ಜೂ.೨೯ರೊಳಗೆ ಪೂ.೧೧ರಿಂದ ಅಪರಾಹ್ನ ೩ರೊಳಗೆ ಸಲ್ಲಿಸಬಹುದು.
ನಾಮಪತ್ರದೊಂದಿಗೆ ಅಭ್ಯರ್ಥಿಯು ಮತದಾರನೆಂದು ನೋಂದಾಯಿತನಾಗಿರುವ ಸಂಸತ್ ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅಭ್ಯರ್ಥಿಗೆ ಸಂಬಂಧಪಟ್ಟ ನಮೂದಿನ ಒಂದು ಪ್ರಮಾಣೀಕೃತ ಪ್ರತಿ ಲಗತ್ತಿಸಬೇಕು. ಅಭ್ಯರ್ಥಿಯು ೧೫ ಸಾವಿರ ರೂ.ವನ್ನು ಠೇವಣಿ ಮಾಡಬೇಕು. ಈ ಮೊತ್ತವನ್ನು ನಾಮಪತ್ರ ಸಲ್ಲಿಸುವಾಗ ಚುನಾವಣಾಧಿಕಾರಿಯ ಬಳಿ ನಗದಾಗಿ ಠೇವಣಿ ಮಾಡಬಹುದು ಅಥವಾ ಮುಂಚಿತವಾಗಿ ಆ ಮೊತ್ತವನ್ನು ಭಾರತದ ರಿಸರ್ವ್ ಬ್ಯಾಂಕ್‌ನಲ್ಲಿ ಅಥವಾ ಸರಕಾರಿ ಖಜಾನೆಯಲ್ಲಿ ಠೇವಣಿ ಮಾಡಬಹುದು. ಅಲ್ಲದೆ ಆ ಮೊತ್ತ ವನ್ನು ಠೇವಣಿ ಮಾಡಲಾಗಿದೆ ಎಂದು ತೋರಿಸುವ ರಶೀದಿಯನ್ನು ನಾಮಪತ್ರಕ್ಕೆ ಲಗತ್ತಿಸಬೇಕು. ನಾಮಪತ್ರದ ನಮೂನೆಗಳನ್ನು ಕೊಠಡಿ ಸಂಖ್ಯೆ-೨೯, ನೆಲ ಅಂತಸ್ತು, ಸಂಸತ್ ಭವನ, ನವದೆಹಲಿ, ಇಲ್ಲಿಂದ ಪಡೆದುಕೊಳ್ಳಬಹುದು.
ನಾಮಪತ್ರಗಳನ್ನು ಜೂ.೩೦ರ ಪೂ.೧೧ಕ್ಕೆ ಪರಿಶೀಲಿಸಲಾಗುವುದು.ನಾಮಪತ್ರ ಹಿಂತೆಗೆದುಕೊಳ್ಳಲು ಅಭ್ಯರ್ಥಿ ಅಥವಾ ಅವರ ಸೂಚಕರು ಅಥವಾ ಅನುಮೋದಕರ ಪೈಕಿ ಯಾರಾದರೊಬ್ಬರು ಚುನಾವಣಾಧಿಕಾರಿಗೆ ಜು.೨ರ ಅಪರಾಹ್ನ ೩ರೊಳಗೆ ಮುಂಚಿತವಾಗಿ ನೊಟೀಸ್ ಸಲ್ಲಿಸಬಹುದು.
ಚುನಾವಣೆಗೆ ಸ್ಪರ್ಧೆ ನಡೆಯುವ ಸಂದರ್ಭ ೨೦೨೨ರ ಜುಲೈ ೧೮ರ ಬೆಳಗ್ಗೆ ೧೦ರಿಂದ ಸಂಜೆ ೫ರವರೆಗೆ ನಿಯಮಗಳಂತೆ ನಿಗದಿಯಾದ ಸ್ಥಳಗಳಲ್ಲಿ ಮತದಾನ ನಡೆಸಲಾಗುವುದು ಎಂದು ರಾಜ್ಯಸಭೆಯ ಸೆಕ್ರೆಟರಿ ಜನರಲ್ ಪಿ.ಸಿ. ಮೋಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







