ಬೆಂಗಳೂರು | ಸಿನೆಮಾ ಸಹ ನಟನ ಕೊಲೆ ಪ್ರಕರಣ: ಆರೋಪಿಗಳಿಬ್ಬರ ಬಂಧನ

ನಟ ಸತೀಶ್ ವಜ್ರ
ಬೆಂಗಳೂರು, ಜೂ.18: ಸಿನೆಮಾ ಸಹ ನಟ ಸತೀಶ್ ವಜ್ರ ಕೊಲೆ ಆರೋಪ ಪ್ರಕರಣ ಸಂಬಂಧ ಇಬ್ಬರನ್ನು ಇಲ್ಲಿನ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸತೀಶ್ ಬಾಮೈದ ಸುದರ್ಶನ್ ಹಾಗೂ ಆತನ ಸಹೋದರ ಸಂಬಂಧಿ ನಾಗೇಂದ್ರ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ತನ್ನ ಸಂಬಂಧಿ ನಾಗೇಂದ್ರ ಜೊತೆ ಸತೀಶ್ ಮನೆಗೆ ಬಂದಿದ್ದ ಸುದರ್ಶನ್, ಸಹೋದರಿಯ ಸಾವಿನ ವಿಚಾರವಾಗಿ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ್ದು, ಸುದರ್ಶನ್ ತನ್ನ ಬಾವನನ್ನೇ ಚಾಕುವಿನಿಂದ ಹಲ್ಲೆಗೈದು ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಸತೀಶ್ ನನ್ನು ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಈ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳಿಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ವಿಚಾರಣೆ ಮುಂದುವರೆದಿದೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸತೀಶ್ ಪತ್ನಿ ಸುಧಾ ಇತ್ತೀಚೆಗೆ ಸಾವನ್ನಪ್ಪಿದ್ದಳು. ತಂಗಿಗೆ ಸರಿಯಾಗಿ ಚಿಕಿತ್ಸೆ ಕೊಡಿಸಿಲ್ಲವೆಂದು ಬಾವ ಸತೀಶ್ ಮೇಲೆ ಅಂದಿನಿಂದಲೂ ಸುದರ್ಶನ್ ಕೋಪಗೊಂಡಿದ್ದ. ಜತೆಗೆ, ಸುಧಾ ಸಾವನ್ನಪ್ಪಿದ ಬಳಿಕ ಮಗು ಯಾರ ಬಳಿ ಇರಬೇಕು ಎಂಬ ವಿಚಾರಕ್ಕೆ ಇಬ್ಬರ ನಡುವೆ ಈಗಾಗಲೇ ಜಗಳ ನಡೆದಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.
ಇನ್ನೂ, ಪಾಂಡವಪುರ ತಾಲೂಕಿನ ಹಳೇಬೀಡು ಮೂಲದವನಾಗಿರುವ ಸತೀಶ್ ಕಳೆದ ಮೂರು ವರ್ಷಗಳಿಂದ ಆರ್.ಆರ್.ನಗರದ ಮನೆಯಲ್ಲಿ ವಾಸವಿದ್ದ. ಇತ್ತೀಚೆಗೆ ಲಗೋರಿ ಎಂಬ ಕಿರು ಚಿತ್ರದ ಮೂಲಕ ಜನರ ಗಮನ ಸೆಳೆದಿದ್ದ.







