ಬೇರೆ ಪಕ್ಷಗಳಲ್ಲಿ ರಾಜಕೀಯ ಸಂಘಟನೆ ಬಿಜೆಪಿಯಂತಿಲ್ಲ: ಜೆ.ಪಿ.ನಡ್ಡಾ

ಬೆಂಗಳೂರು, ಜೂ.18: ಬಿಜೆಪಿ ಕಾರ್ಯಕರ್ತರು ಪರಸ್ಪರ ಪ್ರೀತಿಭಾವನೆಯಿಂದ ಗೌರವಯುತವಾಗಿ ಕಾರ್ಯ ನಿರ್ವಹಿಸಬೇಕು. ಸಮಾಜದಲ್ಲಿ ಬಿಜೆಪಿ ಕಾರ್ಯಕರ್ತರು ಮಾದರಿಯಾಗಿ ನಿಲ್ಲಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಲಹೆ ನೀಡಿದರು.
ಶನಿವಾರ ಯಲಹಂಕ ಬಳಿಯ ಸಿಂಗನಾಯಕನಹಳ್ಳಿ ಖಾಸಗಿ ರೆಸಾರ್ಟ್‍ನಲ್ಲಿ ಆಯೋಜಿಸಿದ್ದ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾವು ಬೇರೆ ಪಕ್ಷಗಳಿಂದ ಹೇಗೆ ಭಿನ್ನವಾಗಿದ್ದೇವೆ ಎಂಬುದನ್ನು ಅರಿಯಬೇಕು. ಬೇರೆ ಪಕ್ಷಗಳಲ್ಲಿ ರಾಜಕೀಯ ಸಂಘಟನೆ ಬಿಜೆಪಿಯಂತಿಲ್ಲ. ಅನ್ಯ ಪಕ್ಷಗಳಲ್ಲಿ ಒಬ್ಬರನ್ನೊಬ್ಬರು ಕಾಲೆಳೆಯುವುದರಲ್ಲಿಯೇ ತಲ್ಲೀನರಾಗಿದ್ದಾರೆ. ಅನಿವಾರ್ಯ ಮತ್ತು ಅತ್ಯಗತ್ಯ ಸಂದರ್ಭದಲ್ಲಿ ಮಧ್ಯರಾತ್ರಿಯಲ್ಲೂ ಪಕ್ಷಕ್ಕಾಗಿ ದುಡಿಯುವವರು ನಮ್ಮ ಬಿಜೆಪಿಯಲ್ಲಿದ್ದಾರೆ. ಹೀಗಾಗಿ ಬಿಜೆಪಿಯ ವೈಶಿಷ್ಟ್ಯವನ್ನು ಅರಿಯಬೇಕು ಎಂದು ಅವರು ನುಡಿದರು.
ಬಿಜೆಪಿ ಇಡೀ ವಿಶ್ವದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ಎಲ್ಲರನ್ನೂ ಪರಿಗಣಿಸುತ್ತದೆ. ಎಲ್ಲ ಕಾರ್ಯಕರ್ತರ ಬಗ್ಗೆ ಪಕ್ಷಕ್ಕೆ ಮಾಹಿತಿಯಿದೆ. ಎಲ್ಲಿ ಬಿಜೆಪಿಯ ಅವಶ್ಯಕತೆಯಿದೆಯೋ ಅಲ್ಲಿ ಬಿಜೆಪಿ ಧಾವಿಸುತ್ತದೆ. ನಾವು ಬೇರೆಯವರಿಗಿಂತ ಭಿನ್ನ ಎಂದು ಅವರು ತಿಳಿಸಿದರು.
ಸಮಾಜವಾದಿ, ಡಿಎಂಕೆ, ಆರ್.ಜೆ.ಡಿ., ಜನತಾದಳದಂಥ ಪಕ್ಷಗಳಲ್ಲಿ ಯಾರೂ ಪ್ರಧಾನಿಯಾಗಲು, ರಾಜ್ಯಾಧ್ಯಕ್ಷ, ರಾಷ್ಟ್ರೀಯ ಅಧ್ಯಕ್ಷರಾಗಲೂ ಸಾಧ್ಯವಿಲ್ಲ. ಇಂತಹ ಪಕ್ಷಗಳಲ್ಲಿ ಕುಟುಂಬದ ಸದಸ್ಯರಷ್ಟೇ ಅಧಿಕಾರ ಅನುಭವಿಸಲು ಸಾಧ್ಯ. ಕಲಿಯುವಿಕೆ ಎನ್ನುವುದು ಜೀವನದ ಪ್ರತಿ ದಿನದಲ್ಲಿಯೂ ಇರುತ್ತದೆ. ಹೀಗಾಗಿ ಕಲಿಯಲು ಯಾರೂ ಹಿಂದೇಟು ಹಾಕಬೇಡಿ. ತರಬೇತಿ ಎನ್ನುವುದು ಕಲಿಯುವಿಕೆ ಎನ್ನುವುದು ಬಿಜೆಪಿಯಲ್ಲಿ ಇದ್ದೇ ಇದೆ ಎಂದು ನಡ್ಡಾ ಹೇಳಿದರು.
ಸಾಧಾರಣ ವ್ಯಕ್ತಿಗೆ ತಿಳಿಸಲು ಸರಳ ಭಾಷೆಯೇ ಉತ್ತಮ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವುದನ್ನು ಅರಿತು ಜನರಿಗೆ ತಿಳಿ ಹೇಳಬೇಕು. ರಾಜಕೀಯ ಕಾರ್ಯಕರ್ತರು ಸದಾ ಜಾಗೃತಾವಸ್ಥೆಯಲ್ಲಿರಬೇಕು. ರಾಜಕೀಯ ಪಕ್ಷಗಳ ಕಾರ್ಯಕರ್ತರಾಗಿ ರಾಜಕೀಯ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ, ವಾತಾವರಣ ಹೇಗಿದೆ, ವಿಪಕ್ಷಗಳ ಬಗ್ಗೆ ಏನು ಮಾಹಿತಿ ಇದೆ ಎಂಬುದನ್ನು ಅರಿತಿರಬೇಕಾದ ಕುತೂಹಲ ಪ್ರವೃತ್ತಿ ಮತ್ತು ಜವಾಬ್ದಾರಿ ಇರಲೇಬೇಕು ಎಂದು ಅವರು ಕರೆ ನೀಡಿದರು.
ಹಿಂದುಳಿದ ವರ್ಗಗಳ ಮೀಸಲಾತಿ ಇಲ್ಲದೇ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಹೇಳುವ ಬೊಮ್ಮಾಯಿ ಅವರೊಬ್ಬ ಜಾಗೃತ ನಾಯಕರೆಂಬುದನ್ನು ತೋರಿಸುತ್ತದೆ. ಈ ವರ್ಗಗಳ ಬಗ್ಗೆ ಅವರು ಆಲೋಚಿಸುತ್ತಿದ್ದಾರೆ ಎಂಬುದನ್ನು ತೋರಿಸುವುದೇ ಜಾಗೃತಾವಸ್ಥೆ. ರಾಜಕೀಯ ಕಾರ್ಯಕರ್ತರ ಜೀವನ ಪಕ್ಷವಾಗಬೇಕು. ತಮ್ಮತಮ್ಮ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬುದನ್ನು ಕಾರ್ಯಕರ್ತರು ಅರಿತಿರಬೇಕು. ಕಾರ್ಯಕರ್ತರು ಸದಾ ಸಕ್ರಿಯರಾಗಿರಬೇಕು ಎಂದು ಅವರು ತಿಳಿಸಿದರು.
ಹಿಂದುಳಿದ ವರ್ಗಗಳ ಸಮುದಾಯ ಬಹಳ ದೊಡ್ಡ ಸಮುದಾಯವಾಗಿದೆ. ಈ ವರ್ಗದಿಂದ ಯಾರೊಬ್ಬರೂ ಬಿಜೆಪಿಯಿಂದ ದೂರ ಉಳಿಯದಂತೆ ನೋಡಿಕೊಳ್ಳಬೇಕು. ಹಿಂದುಳಿದ ಜಾತಿಗಳ ಪ್ರಭಾವಿ ಯಾರು? ನಾಯಕ ಯಾರು? ಎಂಬುದನ್ನು ತಿಳಿಯಬೇಕು. ನಮ್ಮನಮ್ಮಲ್ಲಿ ಜಾತಿ ದ್ವೇಷ ಬರಬಾರದು. ಎಲ್ಲಾ ಜಾತಿಗಳ ಪ್ರಭಾವಿಗಳು ನಾಯಕರು ಬಿಜೆಪಿಯಾಗಬೇಕು ಎಂದು ನಡ್ಡಾ ಕರೆ ನೀಡಿದರು.
ಒಂದು ದಿನ ಮೊಬೈಲ್ ಸ್ವಿಚ್ ಆಫ್ ಮಾಡಿ ಯಾರೊಂದಿಗೂ ಮಾತನಾಡದೇ ಏಕಾಗ್ರತೆಯಿಂದ ನಮ್ಮ ಆರ್ಥಿಕತೆ ಸ್ಥಿತಿಯೇನಿದೆ? ನಮ್ಮ ಅಭಿವೃದ್ಧಿ ಏನಾಗಿದೆ? ನಾವೆಲ್ಲಿದ್ದೇವೆ? ನಾವು ಎಷ್ಟು ಕಾಲಾವಧಿಯಲ್ಲಿ ಎಲ್ಲಿಗೆ ಹೋಗಬೇಕು ಎಂಬುದನ್ನು ಚಿಂತನೆ ಮಾಡಬೇಕು. ಎಲ್ಲ ಜಾತಿಗಳ ನಾಯಕರ ಬಗ್ಗೆ ಪಟ್ಟಿ ಮಾಡಿ ಇದನ್ನು ದ್ವಿಗುಣಗೊಳಿಸಲು ದುಡಿಯಬೇಕು. ನಮ್ಮ ಸಂಘಟನೆ ಎಷ್ಟು ದೊಡ್ಡದಾಗಿದೆ ಎಂದರೆ ಪಕ್ಷಕ್ಕಾಗಿ ನನ್ನ ಕೊಡುಗೆ ಏನು ಎಂಬುದನ್ನೇ ಮರೆತುಬಿಡುವಂತಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗಾಗಿ ಪ್ರತ್ಯೇಕ ಹಾಸ್ಟೆಲ್‍ಗಳು, ಪ್ರತ್ಯೇಕ ವಸತಿ ಶಾಲೆಗಳು, ಉದ್ಯೋಗ ನೀಡುವಂತಾಗಬೇಕು. ಇದನ್ನು ಬಿಜೆಪಿ ಸರಕಾರ ಮಾಡುತ್ತದೆ. ಪ್ರತಿಯೊಂದು ಪ್ರದೇಶಗಳ ಒಬಿಸಿ ಬಗ್ಗೆ ಎಲ್ಲ ಪ್ರದೇಶಗಳಿಗೂ ತಿಳಿದಿರಬೇಕು. ಹೀಗಾಗಿ ದೇಶದ ಪ್ರತಿಯೊಂದು ಪ್ರದೇಶದಲ್ಲಿ ಹಿಂದುಳಿದ ವರ್ಗಗಳಿಗೆ ಆದ ಕೆಲಸಗಳ ಮಾಹಿತಿ ನೀಡುವಂತೆ ರಾಷ್ಟ್ರೀಯ ಒಬಿಸಿ ಮೋರ್ಚಾದ ಅಧ್ಯಕ್ಷ ಡಾ.ಲಕ್ಷ್ಮಣ್ ಅವರಿಗೆ ನಡ್ಡಾ ಸೂಚಿಸಿದರು.
ಬೊಮ್ಮಾಯಿ ಅವರ ಸರಕಾರ ಸಾಮಾಜಿಕ ನ್ಯಾಯವಷ್ಟೇ ಅಲ್ಲ, ಸಾಮಾಜಿಕ ಅವಕಾಶವನ್ನೂ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಸರಕಾರ ಬಂದ ಮೇಲೆ ಭಾರತದ ಬಡತನ ರೇಖೆಗಿಂತ ಕೆಳಗಿನ ಮಟ್ಟ ಶೇ.22ರಿಂದ ಶೇ.10ಕ್ಕೆ ಕಡಿಮೆಯಾಗಿದೆ ಎಂದು ಅವರು ಹೇಳಿದರು.







