ಹಣ ಅಕ್ರಮ ವರ್ಗಾವಣೆ ಪ್ರಕರಣ: ಸತ್ಯೇಂದ್ರ ಜೈನ್ ಜಾಮೀನು ಅರ್ಜಿ ತಿರಸ್ಕೃತ
ಹೊಸದಿಲ್ಲಿ, ಜೂ. ೧೮: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಸಚಿವ ಸತ್ಯೇಂದ್ರ ಜೈನ್ ಅವರಿಗೆ ಜಾಮೀನು ನೀಡಲು ಸಿಬಿಐ ನ್ಯಾಯಾಲಯ ಶನಿವಾರ ನಿರಾಕರಿಸಿದೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಮೇ ೩೦ರಂದು ಜೈನ್ ಅವರನ್ನು ಬಂಧಿಸಲಾಗಿತ್ತು. ಅನಂತರ ಜೂನ್ ೨೭ರ ವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಲಾಗಿತ್ತು.
ಅವರ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣ ೨೦೧೭ರಲ್ಲಿ ಸಿಬಿಐ ಸಲ್ಲಿಸಿದ ಪ್ರಥಮ ಮಾಹಿತಿ ವರದಿಯನ್ನು ಆಧರಿಸಿದೆ. ೨೦೧೫ ಫೆಬ್ರವರಿ ಹಾಗೂ ೨೦೧೭ ಮೇ ನಡುವೆ ಜೈನ್ ತನ್ನ ಆದಾಯ ಮೀರಿದ ಅಕ್ರಮ ಆಸ್ತಿಯನ್ನು ಹೊಂದಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು.
ಜೈನ್ ಸಲ್ಲಿಸಿದ ಜಾಮೀನು ಅರ್ಜಿಯ ಆದೇಶವನ್ನು ಸಿಬಿಐ ನ್ಯಾಯಾಲಯ ಮಂಗಳವಾರ ಕಾದಿರಿಸಿತ್ತು.
ಅಕಿಂಚನ್ ಡೆವಲಪ್ಪರ್ಸ್ ಪ್ರೈವೇಟ್ ಲಿಮಿಟೆಡ್, ಇಂಡೊ ಮೆಟಲ್ ಇಂಪೆಕ್ಸ್ ಪ್ರೈವೇಟ್ ಲಿಮಿಟೆಡ್, ಪರ್ಯಾಸ್ ಇನ್ಫೋ ಸೊಲ್ಯೂಷನ್ಸ್ ಪೈವೇಟ್ ಲಿಮಿಟೆಡ್, ಮಂಗ್ಲಯಾಟನ್ ಪ್ರೊಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಜೆಜೆ ಐಡಿಯಲ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್-ಈ ಐದು ಶೆಲ್ ಕಂಪೆನಿಗಳನ್ನು ಜೈನ್ ಹಾಗೂ ಆತನ ಸಂಬಂಧಿಕರು ನಿಯತ್ರಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿತ್ತು.





