ಬ್ರಾಹ್ಮಣ್ಯ ಸರಿಯಿದ್ದರೆ, ಬಸವಣ್ಣ ಏಕೆ ಧಿಕ್ಕರಿಸಿದರು: ನಂಜಾವಧೂತ ಸ್ವಾಮೀಜಿ

ಬೆಂಗಳೂರು, ಜೂ.18: ಬ್ರಾಹ್ಮಣ್ಯದಲ್ಲಿ ಎಲ್ಲವೂ ಸರಿ ಎನ್ನುವುದಾದರೆ, ಸಾಮಾಜಿಕ ಹರಿಕಾರ ಬಸವಣ್ಣನವರು ಏಕೆ ಅದನ್ನು ಧಿಕ್ಕರಿಸಿ ಹೊರಬಂದರು ಎಂದು ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಪೀಠದ ನಂಜಾವಧೂತ ಸ್ವಾಮೀಜಿ ಪ್ರಶ್ನೆ ಮಾಡಿದರು.
ಶನಿವಾರ ಇಲ್ಲಿನ ಫ್ರೀಡಂಪಾರ್ಕಿನಲ್ಲಿ ಪರಿಷ್ಕೃತ ಪಠ್ಯ ಪುಸ್ತಕ ಹಿಂಪಡೆಯಬೇಕೆಂದು ಆಗ್ರಹಿಸಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಬ್ರಾಹ್ಮಣ್ಯದಲ್ಲಿ ಸಮಾನತೆ, ಕರುಣೆ, ಪ್ರೀತಿ ಉಕ್ಕಿ ಹರಿದು ಎಲ್ಲವೂ ಸರಿಯಿದ್ದರೆ ಬಸವಣ್ಣ ಅವರು ಏಕೆ ಬ್ರಾಹ್ಯಣ್ಯವನ್ನು ಧಿಕ್ಕರಿಸಿ ಎಲ್ಲರಿಗೂ ಲಿಂಗದೀಕ್ಷೆ ನೀಡಿದರು ಎಂದು ಹೇಳಿದರು.
ಸಂವಿಧಾನವನ್ನು ಪ್ರಶ್ನಿಸುವುದು, ಸಂವಿಧಾನವನ್ನು ಬೇರೆ ರೀತಿಯಲ್ಲಿ ಅರ್ಥೈಸುವುದು. ತಾವು ಮಾಡಿದ್ದೇ ಸಂವಿಧಾನ ಎನ್ನುವುದಾದರೆ ದೇಶದ ಮಹನೀಯರಿಗೆ ಏನು ಗೌರವ ಬಂತು. ಇದೊಂದು ಎಚ್ಚರಿಕೆಯ ಸಮಾವೇಶ. ಸರಕಾರ ತಕ್ಷಣವೇ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟಗಾರರು, ಸ್ವಾಮೀಜಿಗಳು ಬೀದಿಗಿಳಿದು ಹೋರಾಡುವ ಪರಿಸ್ಥಿತಿ ಎದುರಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಾಡ ಬಾವುಟವನ್ನು ಒಳ ಉಡುಪಿಗೆ ಹೋಲಿಸಿದ ವ್ಯಕ್ತಿಯನ್ನು ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸುವಾಗ ಸರಕಾರ ಯೋಚಿಸದಿರುವುದೇ ತಪ್ಪು. ಬಸವಣ್ಣ, ನಾರಾಯಣ ಗುರು ಮುಂತಾದವರಿಗೆ ಗೌರವವೇ ಇಲ್ಲವೆ ಎಂದು ಪ್ರಶ್ನೆ ಮಾಡಿದರು.
ಮೆಕಾಲೆ ಸಮಾನ ಶಿಕ್ಷಣ ನೀತಿಯನ್ನು ಜಾರಿಗೊಳಿಸದೇ ಇದ್ದರೆ ನಾವೆಲ್ಲರೂ ಎಲ್ಲೋ ಜೀತದಲ್ಲೇ ಕಳೆಯಬೇಕಿತ್ತು. ಈಗ ಈ ರೀತಿ ಒಂದು ಸಿದ್ಧಾಂತದ ಹೇರಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಹೋರಾಟದ ಆರಂಭ. ಸರಕಾರ ತಕ್ಷಣ ಎಚ್ಚೆತ್ತುಕೊಂಡು ಪರಿಷ್ಕøತ ಪಠ್ಯಪುಸ್ತಕಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯ ಮಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಠ್ಯಪುಸ್ತಕಗಳಲ್ಲಿನ ತಪ್ಪು ಸರಿಪಡಿಸಲು ಶಿಕ್ಷಣ ಸಚಿವರಿಗೆ ನಿರ್ದೇಶನ ನೀಡಿರುವುದಾಗಿ ಹೇಳುತ್ತಾರೆ. ಆದರೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪರಿಷ್ಕøತ ಪಠ್ಯಪುಸ್ತಕಗಳ ವಿತರಣೆಗೆ ಆದೇಶ ಹೊರಡಿಸಿದ್ದಾರೆ. ಇಂತಹ ನಡೆಯನ್ನು ಒಪ್ಪಿಕೊಂಡರೆ ಮುಂದೆ ಒಂದು ದಿನ ಇವರು ಹೇಳಿದ್ದನ್ನೇ ಸಂವಿಧಾನ ಎಂದು ಒಪ್ಪಬೇಕಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.







