ಅಗ್ನಿಪಥ್ ಹಿಂಸಾತ್ಮಕ ಪ್ರತಿಭಟನಾಕಾರರ ಮೇಲೆ ಬುಲ್ಢೋಝರ್ ಬಳಸಲಾಗಿದೆಯೇ?: ಅಸದುದ್ದೀನ್ ಉವೈಸಿ ಪ್ರಶ್ನೆ

ಹೈದರಾಬಾದ್: ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ಮನೆಗಳನ್ನು ಕೆಡವಲು ಬುಲ್ಡೋಝರ್‌ಗಳನ್ನು ಬಳಸುತ್ತೀರಾ? ಎಂದು ಎಐಎಮ್‌ಐಎಮ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಶನಿವಾರ ಪ್ರಶ್ನಿಸಿದ್ದಾಗಿ ANI ವರದಿ ಮಾಡಿದೆ.
ಸಶಸ್ತ್ರ ಪಡೆಗಳಿಗೆ ಅಲ್ಪಾವಧಿಯ ನೇಮಕಾತಿಯನ್ನು ಒದಗಿಸುವ ಅಗ್ನಿಪಥ್ ಯೋಜನೆಯ ವಿರುದ್ಧ ಭಾರತದ ಹಲವಾರು ರಾಜ್ಯಗಳಲ್ಲಿ ಬುಧವಾರದಿಂದ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿದ್ದು, ಸಾವಿರಾರು ಕೋಟಿಯ ಸಾರ್ವಜನಿಕ ಆಸ್ತಿಗಳು ನಷ್ಟ ಹೊಂದಿವೆ. ತೆಲಂಗಾಣದಲ್ಲಿ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಪ್ರಾಣಾಪಾಯವೂ ಸಂಭವಿಸಿದೆ.
ʼನರೇಂದ್ರ ಮೋದಿ ನೇತೃತ್ವದ ಸರ್ಕಾರದ ತಪ್ಪು ನಿರ್ಧಾರದಿಂದ ಹಲವಾರು ಯುವಕರು ಬೀದಿಗಿಳಿದಿದ್ದಾರೆ, ಅಲ್ಲದೆ (ಆಸ್ತಿ ನಾಶಪಡಿಸಿದ) ಪ್ರತಿಭಟನಾಕಾರರ ವಿರುದ್ಧ ಎಷ್ಟು ಬುಲ್ಡೋಝರ್‌ಗಳನ್ನು ಬಳಸಲಾಗಿದೆ?ʼ ಎಂದು ಓವೈಸಿ ಶನಿವಾರ ಕೇಳಿದ್ದಾರೆ. ʼಯಾರ ಮನೆಯನ್ನೂ ಕೆಡವಲು ನಾವು ಬಯಸುವುದಿಲ್ಲʼ ಇದೇ ವೇಳೆ ಓವೈಸಿ ತಿಳಿಸಿದ್ದಾರೆ.
ಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿಕೊಂಡ ಆರೋಪದ ಮೇಲೆ ಬಿಜೆಪಿ ಸರ್ಕಾರವು ಹಲವರ ಮನೆಗಳನ್ನು ಧ್ವಂಸಗೊಳಿಸಿದೆ. ಇವುಗಳಲ್ಲಿ ಬಹುಪಾಲು ಮನೆಗಳು ಮುಸ್ಲಿಮರಿಗೆ ಸೇರಿದ್ದು. ದೆಹಲಿ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಹಲವು ಮುಸ್ಲಿಮರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಯಾವುದೇ ನ್ಯಾಯ ನಿರ್ಣಯಗಳು ನಡೆಯದೇ ಆರೋಪಿಗಳ ಮನೆಯನ್ನು ಕೆಡವಲು ಭಾರತೀಯ ಕಾನೂನಿನಡಿಯಲ್ಲಿ ಯಾವುದೇ ನಿಬಂಧನೆಗಳಿಲ್ಲದಿದ್ದರೂ ಬಿಜೆಪಿ ಸರ್ಕಾರದ ಈ ನಿರ್ಧಾರವನ್ನು ದ್ವೇಷದ ಕೃತ್ಯ ಎಂದೇ ಪ್ರತಿಪಕ್ಷಗಳು, ಮಾನವ ಹಕ್ಕು ಹೋರಾಟಗಾರರು ಕರೆದಿದ್ದಾರೆ.
ವಾರಣಾಸಿ ಪೊಲೀಸ್ ಕಮಿಷನರ್ ಎ ಸತೀಶ್ ಗಣೇಶ್ ಹೇಳಿಕೆಯನ್ನು ಉಲ್ಲೇಖಿಸಿರುವ ಉವೈಸಿ, "ಮುಸ್ಲಿಮರು ನಿಮ್ಮ ಮಕ್ಕಳಲ್ಲವೇ, ಸಿಪಿ [ಪೋಲೀಸ್ ಕಮಿಷನರ್] ಸಾಹಬ್?...ನಾವು ಕೂಡ ಈ ದೇಶದ ಮಕ್ಕಳು." ಎಂದು ಹೇಳಿದ್ದಾರೆ.
“ಇವರು ನಮ್ಮ ಮಕ್ಕಳು, ಹೊರಗಿನವರಲ್ಲ. ಅವರಿಗೆ ತಿಳುವಳಿಕೆ ಮೂಡಿಸುವ ಅಗತ್ಯವಿದೆ ಮತ್ತು ನಾವು ಅದನ್ನು ಮಾಡುತ್ತಿದ್ದೇವೆ” ಎಂದು ವಾರಣಾಸಿ ಕಮಿಷನರ್ ಹೇಳಿದ್ದರು. ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಬಿಜೆಪಿ ವಕ್ತಾರರ ಅವಹೇಳನಕಾರಿ ಹೇಳಿಕೆಗಳ ವಿರುದ್ಧ ಮುಸ್ಲಿಮರ ಪ್ರತಿಭಟನೆಯನ್ನು ಎದುರಿಸಲು ಪೊಲೀಸರು ಇದೇ ರೀತಿಯ ನಿಲುವನ್ನು ಏಕೆ ಅನುಸರಿಸಲಿಲ್ಲ ಎಂದು ಉವೈಸಿ ಪ್ರಶ್ನಿಸಿದ್ದಾರೆ.
ಪ್ರವಾದಿಯವರ ಬಗ್ಗೆ ನಿಂದನಾತ್ಮಕ ಹೇಳಿಕೆಗಾಗಿ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ಆಗ್ರಹಿಸಿರುವ ಓವೈಸಿ, ಶರ್ಮಾ ವಿರುದ್ಧ ಸಂವಿಧಾನದ ಪ್ರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
"ಮುಂಬರುವ ಆರು-ಏಳು ತಿಂಗಳಲ್ಲಿ ನೂಪುರ್ ಶರ್ಮಾ ಅವರನ್ನು ದೊಡ್ಡ ನಾಯಕರನ್ನಾಗಿ ಮಾಡಲಾಗುವುದು ಎಂದು ನನಗೆ ತಿಳಿದಿದೆ. ಆಕೆಯನ್ನು ದೆಹಲಿ ಸಿಎಂ ಅಭ್ಯರ್ಥಿಯನ್ನಾಗಿ ಮಾಡುವ ಸಾಧ್ಯತೆಯೂ ಇದೆ.” ಎಂದು ಓವೈಸಿ ಹೇಳಿದ್ದಾರೆ.







