ಡಿನೋಟಿಫಿಕೇಶನ್ ಪ್ರಕರಣ: ಬಿಎಸ್‍ವೈಗೆ ಜಾಮೀನು ನೀಡಿದ ಕೋರ್ಟ್

ಬೆಂಗಳೂರು, ಜೂ. 19: ಬೆಳ್ಳಂದೂರು ಮತ್ತು ದೇವರಬೀಸನಹಳ್ಳಿಯಲ್ಲಿ ಐಟಿ ಕಾರಿಡಾರ್ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಲಾಗಿದೆ ಎಂಬ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ನಗರದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಈ ಕುರಿತಂತೆ ಬಿಎಸ್‍ವೈ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಮಾನ್ಯ ಮಾಡಿದೆ. ಅಕ್ರಮ ಡಿನೋಟಿಫಿಕೇಶನ್ ಕುರಿತಂತೆ ಬೆಳ್ಳಂದೂರು ನಿವಾಸಿ ವಾಸುದೇವ ರೆಡ್ಡಿ ದೂರು ಸಲ್ಲಿಸಿದ್ದರು. ಅರ್ಜಿದಾರರ ಪರ ವಾದಿಸಿದ ವಕೀಲರು, ಅರ್ಜಿದಾರರು ವೈಯಕ್ತಿಕ ಕಾರಣಕ್ಕೆ ವಿದೇಶಕ್ಕೆ ಹೋಗಬೇಕಿದೆ. ಹೀಗಾಗಿ, ಷರತ್ತಿನಲ್ಲಿ ಈ ಸಂಬಂಧ ಯಾವುದೇ ನಿರ್ಬಂಧ ವಿಧಿಸಬಾರದು ಎಂದು ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ದೂರುದಾರರು ಈ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ತಿಳಿಸಿ, ವಿಚಾರಣೆಯನ್ನು ಜು.16ಕ್ಕೆ ಮುಂದೂಡಿತು.
ಏನಿದು ಪ್ರಕರಣ: ಮಾಹಿತಿ ತಂತ್ರಜ್ಞಾನ (ಐ.ಟಿ) ಕಾರಿಡಾರ್ ನಿರ್ಮಾಣಕ್ಕಾಗಿ ಬೆಂಗಳೂರಿನ ಬೆಳ್ಳಂದೂರು ಮತ್ತು ದೇವರ ಬೀಸನಹಳ್ಳಿಯಲ್ಲಿ ಸ್ವಾಧೀನ ಪಡಿಸಿಕೊಂಡಿದ್ದ 15 ಎಕರೆ 30 ಗುಂಟೆ ಜಮೀನನ್ನು ಅಕ್ರಮವಾಗಿ ಡಿ-ನೋಟಿಫೈ ಮಾಡಿದ ಆರೋಪವನ್ನು ಬಿ.ಎಸ್.ಯಡಿಯೂರಪ್ಪ ಎದುರಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿ ಶಾಸಕ ಆರ್.ವಿ.ದೇಶಪಾಂಡೆ, ಬಿಎಸ್‍ವೈ ಸೇರಿ ಹತ್ತು ಜನರ ವಿರುದ್ಧ ವಾಸುದೇವ ರೆಡ್ಡಿ 2013ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ಖಾಸಗಿ ದೂರು ಸಲ್ಲಿಸಿದ್ದರು. ಆರ್.ವಿ. ದೇಶಪಾಂಡೆ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ಈಗಾಗಲೇ 2015ರಲ್ಲಿ ರದ್ದುಗೊಳಿಸಿದೆ. ಬಾಕಿ ಆರೋಪಿಗಳ ವಿರುದ್ಧದ ದೂರನ್ನು ವಿಚಾರಣಾ ನ್ಯಾಯಾಲಯವೇ ರದ್ದುಗೊಳಿಸಿತ್ತು. ಸದ್ಯ ಯುಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988ರ ಕಲಂ 13(1)(ಡಿ) ಮತ್ತು 13(2)ರ ಅಡಿಯಲ್ಲಿನ ಆರೋಪಗಳ ವಿಚಾರಣೆ ಜೀವಂತವಾಗಿದೆ.







