ಉಡುಪಿ: ಹಲಸು- ಜೇನು ಪ್ರದರ್ಶನ, ಮಾರಾಟ ಮೇಳ ಸಮಾಪನ

ಉಡುಪಿ : ಜಿಲ್ಲಾಡಳಿತ, ಜಿಪಂ ಹಾಗೂ ತೋಟಗಾರಿಕೆ ಇಲಾಖೆ ಗಳ ಸಂಯುಕ್ತ ಆಶ್ರಯದಲ್ಲಿ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಹಲಸು ಹಾಗೂ ಜೇನು ಪ್ರದರ್ಶನ ಮತ್ತು ಮಾರಾಟ ಮೇಳ ರವಿವಾರ ಸಮಾಪನಗೊಂಡಿತು.
ಒಟ್ಟಾರೆ ಮೂರು ದಿನಗಳ ಮೇಳದಲ್ಲಿ ಸುಮಾರು ೧೦ಲಕ್ಷ ರೂ. ಮೊತ್ತದ ವ್ಯವಹಾರ ನಡೆದಿದ್ದು, ಒಟ್ಟು ಆರು ಟನ್ ತೂಬುಗೆರೆಯ ಹಲಸು, ಚೇಳೂರು ಭಾಗದ ಚಂದ್ರ ಹಲಸು ಸೇರಿದಂತೆ ಕೆಂಪು ರುದ್ರಾಕ್ಷಿ ಹಲಸು, ಹಳದಿ ಹಲಸು, ಏಕಾದಶಿ ಹಲಸು, ಶಿವರಾತ್ರಿ ಹಲಸಿನ ಹಣ್ಣುಗಳ ಪೈಕಿ ನಾಲ್ಕು ಟನ್ ಹಣ್ಣುಗಳು ಮಾರಾಟವಾದವು.
೧೦೦ ಲೀಟರ್ ಜೇನುತುಪ್ಪ, ೩೦೦೦ ಹಲಸಿನ ಹಣ್ಣಿನ ಹೊಳಿಗೆ ಸೇರಿದಂತೆ ವಿವಿಧ ಖಾದ್ಯಗಳು ಭರ್ಜರಿ ಮಾರಾಟಗೊಂಡವು. ಕೆ.ಜಿ.ಗೆ ೨೫೦ರೂ. ಮೌಲ್ಯದ ರಾಮ್‌ಬೂತಾನ್ ಹಣ್ಣು ಸುಮಾರು ಒಂದು ಕ್ವಿಂಟಲ್‌ನಷ್ಟು ಮಾರಾಟವಾದವು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಾರಾಂತ್ಯದಲ್ಲಿ ಹೆಚ್ಚಿನ ವ್ಯಾಪಾರ ನಡೆಯಿತು.
ಕೊನೆಯ ದಿನವಾದ ಇಂದು ಮೇಳಕ್ಕೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಕುಟುಂಬ ಸಮೇತರಾಗಿ ಭೇಟಿ ನೀಡಿ, ವಿವಿಧ ಬಗೆಯ ಹಲಸು, ಅದರ ಖಾದ್ಯ ಮತ್ತು ಉತ್ಪನ್ನ ಗಳ ರುಚಿ ಅನುಭವಿಸಿದರು. ಈ ಸಂದರ್ಭದಲ್ಲಿ ತೋಟ ಗಾರಿಕಾ ಇಲಾಖೆಯ ಉಪನಿರ್ದೇಶಕ ಭುವನೇಶ್ವರಿ, ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ ಬಿ.ವಿ., ಸಹಾಯಕ ನಿರ್ದೇಶಕರಾದ ನಿದೇಶ್, ಗುರು ಪ್ರಪಸಾದ್ ಮೊದಲಾದವರು ಉಪಸ್ಥಿತರಿದ್ದರು.