ಮೋದಿ ಸರಕಾರದ ಜನಪರ ಆಡಳಿತ ಸಹಿಸಲಾಗದೆ ಇಲ್ಲಸಲ್ಲದ ಆರೋಪ: ಕೋಟ
ಕುಂದಾಪುರದಲ್ಲಿ ವಿಕಾಸ ತೀರ್ಥ ಬೈಕ್ ರ್ಯಾಲಿಗೆ ಚಾಲನೆ

ಕುಂದಾಪುರ : ಪ್ರಧಾನಿ ನರೆಂದ್ರ ಮೋದಿ ಆಡಳಿತದ ಕೇಂದ್ರ ಬಿಜೆಪಿ ಸರಕಾರದ ಜನಪರ ಆಡಳಿತವನ್ನು ಸಹಿಸಲಾಗದ ವಿಪಕ್ಷಗಳು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ಜನರಿಗೆ ಆಡಳಿತದ ಒಟ್ಟು ಮಾಹಿತಿಯನ್ನು ನೀಡಲು ಈ ವಿಕಾಸ ತೀರ್ಥಯಾತ್ರೆ ಅತ್ಯಂತ ಪರಿಣಾಮಕಾರಿ ಯಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎಂಟು ವರ್ಷದ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ಯುವಮೋರ್ಚಾ ಕುಂದಾಪುರ ಮಂಡಲ ರವಿವಾರ ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಹಮ್ಮಿಕೊಂಡಿದ್ದ ವಿಕಾಸ ತೀರ್ಥ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ನರೆಂದ್ರ ಮೋದಿ ಆಡಳಿತದ ಎಂಟು ವರ್ಷಗಳಲ್ಲಿ ಆದ ಅಭಿವೃದ್ದಿ ಹಾಗೂ ದೇಶ ರಕ್ಷಣೆಯಲ್ಲಿ ತೋರಿದ ಉತ್ಸಾಹ, ಆಡಳಿತಾತ್ಮಕ ವ್ಯವಸ್ಥೆಯಲ್ಲಿ ತಂದಿರುವ ಅನೇಕ ಸುಧಾರಣೆಗಳೂ ಸೇರಿದಂತೆ ಒಟ್ಟಾರೆಯ ಅಭಿವೃದ್ದಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವೇಗದ ಆಡಳಿತ ಅತ್ಯಂತ ಖುಷಿ ನೀಡಿದೆ ಎಂದರು.
ನರೇಂದ್ರ ಮೋದಿಯ ಎಂಟು ವರ್ಷಗಳ ಆಡಳಿತ ಜನಪರ ಯೋಜನೆಗಳು, ಒಟ್ಟು ವಿಚಾರಗಳನ್ನು ಜನತೆಗೆ ತಲುಪಿಸುವಲ್ಲಿ ವಿಕಾಸ ಯಾತ್ರೆ ಯಶಸ್ವಿಯಾಗ ಲಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ಬಿಜೆಪಿಯ ಒಟ್ಟು ಆಡಳಿತದ ಪರಿಕಲ್ಪನೆಗಳು ಒಟ್ಟಾಗಿ ಒಂದಾಗಿ ದೇಶವನ್ನು ಮುನ್ನಡೆಸುವಂತಹ ರೀತಿ ನಿಜಕ್ಕೂ ಅದ್ಭುತವಾಗಿದೆ ಎಂದು ಅವರು ತಿಳಿಸಿದರು.
ಬಿಜೆಪಿ ಜಿಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಕುಂದಾಪುರ ಮಂಡಲ ಪ್ರಭಾರಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಉಳ್ತೂರು ಮೊದಲಾದವರು ಉಪಸ್ಥಿತರಿದ್ದರು.
ರಘುಪತಿ ಭಟ್- ಪ್ರಮೋದ್ ಬುಲೆಟ್ ಸವಾರಿ!
ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ 8 ವರ್ಷ ಯಶಸ್ವಿ ಆಡಳಿತ ಪೂರೈಸಿದ ಪ್ರಯುಕ್ತ ಉಡುಪಿ ಗ್ರಾಮಾಂತರ ಬಿಜೆಪಿ ವತಿಯಿಂದ ವಿಕಾಸ್ ತೀರ್ಥ ಬೈಕ್ ರ್ಯಾಲಿಯನ್ನು ರವಿವಾರ ಬ್ರಹ್ಮಾವರದಿಂದ ಉಡುಪಿಯವರೆಗೆ ಹಮ್ಮಿಕೊಳ್ಳಲಾಗಿತ್ತು.
ಬ್ರಹ್ಮಾವರ ಬಿಜೆಪಿ ಕಚೇರಿ ಎದುರು ವಿಕಾಸ್ ತೀರ್ಥ ಬೈಕ್ ರ್ಯಾಲಿಗೆ ಶಾಸಕ ಕೆ.ರಘುಪತಿ ಭಟ್ ಚಾಲನೆ ನೀಡಿದರು. ಬಳಿಕ ರಘುಪತಿ ಭಟ್ ಬ್ರಹ್ಮಾವರ ದಿಂದ ಸಂತೆಕಟ್ಟೆವರೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಜೊತೆ ಬುಲೆಟ್ ಚಲಾಯಿಸಿಕೊಂಡು ರ್ಯಾಲಿಯಲ್ಲಿ ಸಾಗಿ ಬಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀಶ ನಾಯಕ್, ಗ್ರಾಮಾಂತರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗಣೇಶ್ ಸೂರಾಲು, ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಶ್ವೇತಾ ಪೂಜಾರಿ, ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಣೇಶ್ ಕುಲಾಲ್, ಸಚಿನ್ ಪೂಜಾರಿ, ಗ್ರಾಮಾಂತರ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅರ್ಜುನ್ ಪ್ರಭು ಮೊದಲಾದವರು ಉಪಸ್ಥಿತರಿದ್ದರು.
