ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರು ಪಾಲು

ಕಡೂರು : ಈಜಾಡಲು ಹೋಗಿ ಮೂವರು ಯುವಕರು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆಣೇಗೆರೆ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕರನ್ನು ಬಿಟ್ಟೇನಹಳ್ಳಿ ಗ್ರಾಮದ ಬಿ.ಬಿ.ದರ್ಶನ್ (16), ರಾಕೇಶ್.ಬಿ.ಬಿ.(17), ಬಿ.ಬಿ.ಕಿರಣ್ (20) ಎಂದು ಗುರುತಿಸಲಾಗಿದೆ.
ಇಂದು (ರವಿವಾರ) ಮಧ್ಯಾಹ್ನ 2 ಗಂಟೆಯ ಸಂದರ್ಭದಲ್ಲಿ ನೇರಳೆ ಹಣ್ಣು ಕೊಯ್ದುಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೋದ ಯುವಕರು ಸ್ನಾನ ಮಾಡಲೆಂದು ಆಣೇಗೆರೆ ಗ್ರಾಮದ ಕೆರೆಯ ಕೊನೆಯ ಕೋಡಿಯ ಬಳಿ ನೀರಿಗೆ ಇಳಿದಿದ್ದಾರೆ.ಕೆರೆಯಲ್ಲಿ ಹೂಳು ತೆಗೆದಿದ್ದು ಆಳವಾದ ಗುಂಡಿಗಳಿದ್ದ ಕಾರಣ ನೀರಿಗೆ ಇಳಿದ ಹುಡುಗರಿಗೆ ಮೇಲೆ ಬರಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.
ಸಮೀಪದಲ್ಲಿ ಬಟ್ಟೆ ತೊಳೆಯುತ್ತಿದ್ದ ಮಹಿಳೆಯೊಬ್ಬರು ಸೀರೆ ಎಸೆದು ಹುಡುಗರನ್ನು ರಕ್ಷಿಸುವ ಪ್ರಯತ್ನ ಮಾಡಿದರು ಪ್ರಯೋಜನವಾಗಿಲ್ಲ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಡಿಯೈ.ಎಸ್.ಪಿ. ನಾಗರಾಜ್,ವೃತ್ತ ನಿರೀಕ್ಷಕ ಶಿವಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಮೃತ ದೇಹಗಳಿಗಾಗಿ ಹುಡುಕಾಟ ನಡೆಸಿದ್ದಾರೆ.





