ಬಿಜೆಪಿ ಕಚೇರಿಯ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ʼಅಗ್ನಿವೀರರಿಗೆʼ ಪ್ರಾತಿನಿಧ್ಯ ನೀಡಲಾಗುವುದು ಎಂದ ಹಿರಿಯ ಮುಖಂಡ

ಹೊಸದಿಲ್ಲಿ: ಬಿಜೆಪಿ ಪಕ್ಷದ ಕಚೇರಿಯ ಕಾವಲು ಕೆಲಸದಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡಲಾಗುವುದು ಎಂದು ಬಿಜೆಪಿಯ ಹಿರಿಯ ನಾಯಕ ಕೈಲಾಶ್ ವಿಜಯವರ್ಗಿಯ ಹೇಳಿದ್ದಾರೆ. ಈ ಹೇಳಿಕೆ ಸದ್ಯ ಸಾಮಾಜಿಕ ತಾಣದಲ್ಲಿ ವಿವಾದ ಸೃಷ್ಟಿಸಿದೆ.
“21 ರಿಂದ 25 ವರ್ಷ ವಯಸ್ಸಿನಲ್ಲಿ 4 ವರ್ಷಗಳ ಕಾಲ ರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನಂತರ ಅಗ್ನಿವೀರ್ ತರಬೇತಿ ಪಡೆದು ಹೊರಬರುವಾಗ, ಅವನ ಬಳಿ ₹ 11 ಲಕ್ಷ ಇರುತ್ತದೆ. ಅವರಿಗೆ ಅಗ್ನಿವೀರ ಎಂಬ ಟ್ಯಾಗ್ ಇರುತ್ತದೆ. ನಾನು ಬಿಜೆಪಿ ಕಚೇರಿಗೆ ಸೆಕ್ಯೂರಿಟಿ ಗಾರ್ಡ್ ನೇಮಿಸಲು ಬಯಸಿದರೆ, ಅಗ್ನಿವೀರ್‌ಗೆ ಆದ್ಯತೆ ನೀಡುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಶನಿವಾರ ಇಂದೋರ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
"ನನ್ನ ಸ್ನೇಹಿತ 35 ನೇ ವಯಸ್ಸಿನಲ್ಲಿ ನಿವೃತ್ತರಾದ ಮಾಜಿ ಸೈನಿಕನಿಗೆ ಭದ್ರತೆಯ ಕೆಲಸವನ್ನು ನೀಡಿದ್ದಾನೆ" ಎಂದು ಅವರು ಹೇಳಿದರು.
ಬಿಜೆಪಿಯ ಹಿರಿಯ ನಾಯಕರ ಈ ಹೇಳಿಕೆಯನ್ನುಖಂಡಿಸಿ, ದೇಶದ ನಿರುದ್ಯೋಗಿ ಯುವಕರನ್ನು ಅವಮಾನಿಸುತ್ತಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿತು.
ಒಂದು ಕಡೆ ನಿರುದ್ಯೋಗ ಪರಿಸ್ಥಿತಿ ಸುಧಾರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದರೆ, ಇನ್ನೊಂದು ಕಡೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯುವಕರಿಗೆ ಸೆಕ್ಯೂರಿಟಿ ಗಾರ್ಡ್‌ಗಳ ಕೆಲಸದ ಆಫರ್ ನೀಡಿ ಅವಮಾನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದೀಯ ಸಮಿತಿಯ ಮಾಧ್ಯಮ ಉಸ್ತುವಾರಿ ಕೆ.ಕೆ.ಮಿಶ್ರಾ ಹೇಳಿದ್ದಾರೆ.
ಈ ನಡುವೆ ಬಿಜೆಪಿ ನಾಯಕರು ವಿಜಯವರ್ಗಿಯರನ್ನು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ವಕ್ತಾರ ಹಿತೇಶ್ ವಿಜಯವರ್ಗಿಯಾ ಮಾತನಾಡಿ, “ಭಾರತದಲ್ಲಿ ಈ ಅಗ್ನಿಪಥ್ ಯೋಜನೆಯು ನಾಗರಿಕ ರಕ್ಷಣೆಯಲ್ಲಿ ಕ್ರಾಂತಿಯನ್ನು ತರಲಿದೆ. ಯುರೋಪಿನಂತೆ, ಭಾರತವು ತರಬೇತಿ ಪಡೆದ ನಾಗರಿಕ ಪಡೆಯನ್ನು ಹೊಂದಿಲ್ಲ. ಕೈಗಾರಿಕೋದ್ಯಮಿಗಳು, ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳ ಪರ್ಸನಲ್ ಗಾರ್ಡ್‌ಗಳು ಉತ್ತಮ ಸಂಬಳವನ್ನು ಪಡೆಯುತ್ತಾರೆ, ಅದು ಖಂಡಿತವಾಗಿಯೂ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಎಂದು ಎಲ್ಲರಿಗೂ ತಿಳಿದಿದೆ" ಎಂದಿದ್ದಾರೆ.







