ಅಗ್ನಿಪಥ್ ಯೋಜನೆ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ; ರಸ್ತೆ ತಡೆ ನಡೆಸಿದ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಮಂಗಳೂರು: ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ನೂತನ ಅಗ್ನಿಪಥ್ ಯೋಜನೆಯನ್ನು ಖಂಡಿಸಿಯುವ ಕಾಂಗ್ರೆಸ್ ಕಾರ್ಯಕರ್ತರು ರವಿವಾರ ರಾತ್ರಿ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟಿಸಿದರು. ಈ ಸಂದರ್ಭ ರಸ್ತೆ ತಡೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮುಹಮ್ಮದ್ ನಲಪ್ಪಾಡ್ ಮಾತನಾಡಿ ಕೇವಲ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವ ಅಗ್ನಿಪಥ್ ಯೋಜನೆಗೆ ಅರ್ಥವಿಲ್ಲ. ಪಿಯುಸಿ ಕಲಿಯುವ ವಯಸ್ಸಿನಲ್ಲಿ ಸೈನ್ಯ ಸೇರಿದರೆ ಆತ ಪದವಿ ಸಹಿತ ಮತ್ತಿತರ ಕೋರ್ಸ್‌ಗಳನ್ನು ಕಲಿಯುವುದು ಯಾವಾಗ? ನಾಲ್ಕು ವರ್ಷದ ಬಳಿಕ ಆತ ಏನು ಮಾಡಬೇಕು? ಎಂದು ಪ್ರಶ್ನಿಸಿದರು.
೨೦೧೪ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೇರಿದಾಗ ವರ್ಷಕ್ಕೆ ೨ ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಅದರಂತೆ ೮ ವರ್ಷದಲ್ಲಿ ೧೬ ಕೋಟಿ ಜನರಿಗೆ ಉದ್ಯೋಗ ಸಿಗಬೇಕಿತ್ತು. ಆದರೆ ಈವರೆಗೆ ಅರ್ಹರಿಗೆ ಉದ್ಯೋಗವನ್ನೇ ನೀಡಲಿಲ್ಲ. ಕೋವಿಡ್ ಸಂದರ್ಭ ಕೋಟ್ಯಂತರ ಜನರು ಬೀದಿ ಪಾಲಾದರು. ಅವರ ರಕ್ಷಣೆಗೆ ನಿಲ್ಲುವ ಬದಲು ಅದಾನಿ, ಅಂಬಾನಿ ಪರವಾಗಿ ಕೆಲಸ ಮಾಡುತ್ತಿದೆ. ಹಾಗಾಗಿ ಯುವಕರು ಬೀದಿಗಿಳಿಯದೆ ಇನ್ನೇನು ಮಾಡಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಯು.ಟಿ.ಖಾದರ್ ಮಾತನಾಡಿ ಯುವಕರ ಶಿಕ್ಷಣ ಮತ್ತು ಉದ್ಯೋಗದ ಹಕ್ಕನ್ನು ಕಸಿಯುವ ಕೇಂದ್ರದ ಅಗ್ನಿಪಥ್ ಯೋಜನೆಯು ದೇಶಕ್ಕೆ ಮಾರಕವಾಗಿದೆ. ಈಗಾಗಲೆ ವಿಮಾನ ನಿಲ್ದಾಣ, ರೈಲ್ವೆ, ಬ್ಯಾಂಕ್ ಇತ್ಯಾದಿ ಕ್ಷೇತ್ರವನ್ನು ಖಾಸಗೀಕರಣ ಮಾಡಿರುವ ಬಿಜೆಪಿ ಸರಕಾರ ಇದೀಗ ಸೈನ್ಯವನ್ನೂ ಖಾಸಗೀಕರಣ ಮಾಡಲು ಹೊರಟಿದೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ. ದೇಶದ ಗಡಿಕಾಯುವ ಸೈನಿಕರ ಹಿತ ಕಾಯುವ ಬದಲು ಅವರನ್ನು ಅವಮಾನಿಸಲು ಹೊರಟಿರುವ ಬಿಜೆಪಿ ಸರಕಾರದ ಮುಖವಾಡ ಕಳಚಿ ಬಿದ್ದಿದೆ ಎಂದರು.
ಡಿಸಿಸಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಮುಖಂಡ ಹೇಮನಾಥ್ ಶೆಟ್ಟಿ ಪುತ್ತೂರು, ಯುವ ಕಾಂಗ್ರೆಸ್ ಮುಖಂಡರಾದ ನಾಸಿರ್ ಸಾಮಣಿಗೆ, ಗಿರೀಶ್ ಆಳ್ವ, ಮೇರಿಲ್ ರೇಗೊ, ಆಶಿತ್ ಪಿರೇರಾ, ಸುರಯ್ಯಾ ಅಂಜುಮ್, ಫಿರೋಝ್ ಮಲಾರ್ ಮತ್ತಿತರರು ಪಾಲ್ಗೊಂಡಿದ್ದರು.







.jpeg)



