ಪುಣೆ: ಒಟ್ಟಿಗೆ 10ನೇ ತರಗತಿ ಪರೀಕ್ಷೆ ಬರೆದಿದ್ದ ಅಪ್ಪ ಪಾಸ್, ಮಗ ಫೇಲ್ !

ಪುಣೆ,ಜೂ.19: ಮಹಾರಾಷ್ಟ್ರ ಪ್ರೌಢ ಶಿಕ್ಷಣ ಮಂಡಳಿಯ ಈ ವರ್ಷದ 10ನೇ ತರಗತಿಯ ಪರೀಕ್ಷೆಗೆ ಒಟ್ಟಿಗೆ ಹಾಜರಾಗಿದ್ದ ಪುಣೆಯ 43ರ ಹರೆಯದ ವ್ಯಕ್ತಿ ಉತ್ತೀರ್ಣಗೊಂಡಿದ್ದರೆ ಅವರ ಮಗ ಅನುತ್ತೀರ್ಣಗೊಂಡಿದ್ದಾನೆ. ಪರೀಕ್ಷೆಯ ಫಲಿತಾಂಶಗಳು ಶುಕ್ರವಾರ ಪ್ರಕಟಗೊಂಡಿದ್ದವು.
ತನ್ನ ಕುಟುಂಬಕ್ಕೆ ನೆರವಾಗಲು ಏಳನೇ ತರಗತಿಯ ಬಳಿಕ ಶಾಲೆಯನ್ನು ತೊರೆದು ಉದ್ಯೋಗಕ್ಕೆ ಸೇರಿದ್ದ ಭಾಸ್ಕರ ವಾಘ್ಮಾರೆಯವರು ಓದನ್ನು ಮುಂದುವರಿಸಲು ತೀವ್ರ ಆಸಕ್ತಿಯನ್ನು ಹೊಂದಿದ್ದರು. 30 ವರ್ಷಗಳ ಅಂತರದ ಬಳಿಕ ತನ್ನ ಪುತ್ರ ಸಾಹಿಲ್ ಜೊತೆ 10ನೇ ತರಗತಿಯ ಪರೀಕ್ಷೆಯನ್ನು ಬರೆದಿದ್ದರು.
‘ಹೆಚ್ಚು ಓದಬೇಕು ಎಂದು ನಾನು ಸದಾ ಬಯಸಿದ್ದೆ, ಆದರೆ ಕುಟುಂಬದ ಹೊಣೆಗಾರಿಕೆಗಳಿಂದಾಗಿ ಮತ್ತು ನಮ್ಮ ತುತ್ತಿನ ಚೀಲಗಳನ್ನು ತುಂಬಿಕೊಳ್ಳಲು ದುಡಿಮೆ ಅನಿವಾರ್ಯವಾಗಿದ್ದರಿಂದ ಅದು ಮೊದಲೇ ಸಾಧ್ಯವಾಗಿರಲಿಲ್ಲ’ ಎಂದು ಪುಣೆಯ ಬಾಬಾಸಾಹೇಬ್ ಅಂಬೇಡ್ಕರ್ ಡಯಾಸ್ನ ನಿವಾಸಿ ವಾಘ್ಮಾರೆ ತಿಳಿಸಿದರು.
‘ಕೆಲವು ಸಮಯದಿಂದ ಓದನ್ನು ಪುನರಾರಂಭಿಸಲು ಮತ್ತು ಹೆಚ್ಚು ಗಳಿಸಲು ನನಗೆ ನೆರವಾಗುವ ಏನಾದರೂ ಕೋರ್ಸ್ಗಳನ್ನು ಮಾಡಲು ಉತ್ಸುಕನಾಗಿದ್ದೆ. ಹೀಗಾಗಿ 10ನೇ ತರಗತಿ ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದ್ದೆ. ನನ್ನ ಮಗನೂ ಈ ವರ್ಷ ಪರೀಕ್ಷೆಗೆ ಹಾಜರಾಗಲಿದ್ದ ಮತ್ತು ಇದು ನನಗೆ ನೆರವಾಗಿತ್ತು’ ಎಂದು ಖಾಸಗಿ ಉದ್ಯೋಗದಲ್ಲಿರುವ ವಾಘ್ಮಾರೆ ಹೇಳಿದರು.
ಪ್ರತಿ ದಿನ ಕೆಲಸ ಮುಗಿದ ಬಳಿಕ ಓದುತ್ತಿದ್ದೆ ಮತ್ತು ಪರೀಕ್ಷೆಗೆ ತಯಾರಾಗುತ್ತಿದ್ದೆ ಎಂದ ವಾಘ್ಮಾರೆಗೆ ತಾನು ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದಕ್ಕೆ ಸಂತಸವಿದೆಯಾದರೂ ಮಗ ಎರಡು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದಕ್ಕೆ ಬೇಸರವೂ ಇದೆ. ‘ಪೂರಕ ಪರೀಕ್ಷೆ ಬರೆಯಲು ನನ್ನ ಮಗನಿಗೆ ನೆರವಾಗುತ್ತೇನೆ. ಆತ ಉತ್ತೀರ್ಣನಾಗುತ್ತಾನೆ ಎಂಬ ಭರವಸೆಯಿದೆ ’ಎಂದು ಅವರು ಹೇಳಿದರು. ಸಾಹಿಲ್ ಕೂಡ ಇದೇ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾನೆ.







