ಆಯೋಗದ ನಿರ್ದೇಶನಗಳನ್ನು ಪಾಲಿಸದಿದ್ದಲ್ಲಿ ಕಠಿಣ ಕ್ರಮ: ಅಧ್ಯಕ್ಷ ಎಂ. ಶಿವಣ್ಣ ಎಚ್ಚರಿಕೆ

ಶಿವಣ್ಣ
ಮಂಗಳೂರು: ಪೌರಕಾರ್ಮಿಕರ ಹಿತದೃಷ್ಟಿಯಿಂದ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ನೀಡುವ ನಿರ್ದೇಶನಗಳನ್ನು ಪಾಲಿಸದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಲಾಗು ವುದು ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ಶಿವಣ್ಣ (ಕೋಟೆ) ಎಚ್ಚರಿಕೆ ನೀಡಿದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಕುಂದು ಕೊರತೆಗಳ ಬಗ್ಗೆ ರವಿವಾರ ನಗರದ ಸರ್ಕ್ಯೂಟ್ ಹೌಸ್ನಲ್ಲಿ ಸಭೆ ನಡೆಸಿ ಅವರು ಮಾತನಾಡಿದರು.
ಮಂಗಳೂರು ಮಹಾನಗರ ಪಾಲಿಕೆ ಸಹಿತ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರಿಗೆ ಇಎಸ್ಐ, ಪಿಎಫ್, ವಿಮಾ ಯೋಜನೆಗಳು, ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ನೀಡಲಾಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಾಗಾರ ಹಮ್ಮಿಕೊಳ್ಳುವಂತೆ ೮ ತಿಂಗಳ ಹಿಂದೆಯೇ ನಿರ್ದೇಶನ ನೀಡಲಾಗಿತ್ತು. ಆದರೆ ಈವರೆಗೂ ಕಾರ್ಯಾಗಾರ ನಡೆದಿಲ್ಲ, ಈ ರೀತಿಯ ಉದಾಸೀನತೆಯನ್ನು ಆಯೋಗ ಎಂದಿಗೂ ಸಹಿಸುವುದಿಲ್ಲ. ಆಯೋಗದ ನಿರ್ದೇಶನಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು ಎಂದರು.
ಪೌರ ಕಾರ್ಮಿಕರಿಗೆ ಗುರುತಿನ ಚೀಟಿ, ವೇತನ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ವಿತರಿಸಬೇಕು, ಇದರಿಂದಾಗಿ ಅವರು ಪಡೆಯುವ ವೇತನದ ಮಾಹಿತಿ ತಿಳಿಯಲಿದೆ. ಅಲ್ಲದೇ ವಿವಿಧ ರೀತಿಯ ಸರಕಾರಿ ಸೌಲಭ್ಯಗಳನ್ನು ಪಡೆಯಲು ಅವರಿಗೆ ಅನುಕೂಲವಾಗಲಿದೆ, ರಾಜ್ಯದ ವಿವಿಧ ಭಾಗಗಳಿಗೆ ಅನುಕೂಲವಾಗುಂತಹ ಸಮವಸ್ತವನ್ನು ಪೌರ ಕಾರ್ಮಿಕರಿಗೆ ನೀಡುವ ಬಗ್ಗೆ ಕ್ರಮವಹಿಸಲಾಗುತ್ತಿದೆ. ಎಂದು ಎಂ. ಶಿವಣ್ಣ (ಕೋಟೆ) ತಿಳಿಸಿದರು.
ಪೌರ ಕಾರ್ಮಿಕರು ಮ್ಯಾನ್ಹೋಲ್ನಲ್ಲಿ ಇಳಿಯುವುದನ್ನು ಕಡ್ಡಾಯವಾಗಿ ತಡೆಗಟ್ಟಬೇಕು. ತಪಾಸಣೆ ವೇಳೆ ಮ್ಯಾನ್ಹೋಲ್ಗಳಿಗೆ ಇಳಿಯುವುದು ಕಂಡುಬಂದಲ್ಲಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದ ಎಂ. ಶಿವಣ್ಣ (ಕೋಟೆ) ಪೌರ ಕಾರ್ಮಿಕರ ವಿಶ್ರಾಂತಿ ಕೊಠಡಿಗಳನ್ನು ಮಾನವೀಯ ದೃಷ್ಟಿಯಿಂದ ನಿರ್ಮಾಣ ಮಾಡಬೇಕು. ವಿಶ್ರಾಂತಿ ಕೊಠಡಿಗಳಲ್ಲಿ ಊಟ, ಉಪಹಾರ ಸೇವನೆಗೆ ಹಾಗೂ ವಿಶ್ರಾಂತಿ ಮತ್ತು ಶೌಚಾಲಯಕ್ಕೆ ಅಗತ್ಯ ಸ್ಥಳಾವಕಾಶವಿರಬೇಕು, ಈ ಬಗ್ಗೆಯೂ ಸರಕಾರದಿಂದ ಆದೇಶ ಹೊರಡಿಸಲಾಗುವುದು ಎಂದರು.
ಡಿಸಿಪಿ ದಿನೇಶ್ ಕುಮಾರ್, ಮಂಗಳೂರು ತಹಶೀಲ್ದಾರ್ ಪುರಂದರ್, ಜಿಲ್ಲಾ ನಗರಾಭೀವೃದ್ದಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತ ಎಂ. ರವಿಕುಮಾರ್, ಮಂಗಳೂರು ತಾಪಂ ಇಒ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.







