"ನಾ..ನಾಯಕಿ" ಮೂಲಕ ಮಹಿಳೆಯರ ಸಂಘಟನೆ: ಮಮತಾ ಗಟ್ಟಿ

ಮಂಗಳೂರು, ಜೂ. 19: ರಾಜ್ಯ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಮಹಿಳೆಯರಿಗೆ ರಾಜಕೀಯ ಶಕ್ತಿ ನೀಡುವ ಉದ್ದೇಶದಿಂದ ಪ್ರಾರಂಭಿಸಿರುವ " ನಾ..ನಾಯಕಿ" ಕಾರ್ಯಕ್ರಮವನ್ನು ಮೂಡಬಿದ್ರೆ ಕ್ಷೇತ್ರದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸಿ ಆಮೂಲಕ ಮಹಿಳೆಯರನ್ನು ಸಂಘಟಿಸುವ ಕಾರ್ಯಕ್ಕೆ ಮುನ್ನುಡಿ ಬರೆಯಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಮಮತಾ ಗಟ್ಟಿ ಹೇಳಿದ್ದಾರೆ.
ಅವರು ಮುಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ರವಿವಾರ ನಡೆದ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾನಾಡಿದ ಮುಲ್ಕಿ- ಮೂಡಬಿದ್ರೆ ಕ್ಷೇತ್ರದ ಚುನಾವಣೆ ಉಸ್ತುವಾರಿ ಮಿಥುನ್ ರೈ ಅವರು ಮಾತನಾಡಿ, ಮುಲ್ಕಿ ಬ್ಲಾಕ್ ವ್ಯಾಪ್ತಿಗೆ ಸೇರಿದ ಬೂತ್ ಗಳಲ್ಲಿ ಈಗಾಗಲೇ ಪಕ್ಷ ಸಂಘಟನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಬಗ್ಗೆ ಇನ್ನೂ ಕೆಲವೇ ದಿನಗಳಲ್ಲಿ ಕಾರ್ಯಕ್ರಮಗಳ ರೂಪುರೇಷೆ ಗಳನ್ನು ರೂಪಿಸಿಕೊಳ್ಳಲಾಗುವುದು. ಕಾರ್ಯಕರ್ತರು ಪಕ್ಷ ಸಂಘಟನೆಗೆ ಸಹಕಾರ ನೀಡಬೇಕೆಂದು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸದಸ್ಯತ್ವ ಪ್ರಕ್ರಿಯೆಯಲ್ಲಿ ಗರಿಷ್ಠ ಸಾಧನೆಗೈದ 10 ಮಂದಿ ಕಾರ್ಯಕರ್ತರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಕೆಪಿಸಿಸಿ ಕೋ ಆರ್ಡಿನೇಟರ್ ಎಚ್. ವಸಂತ ಬರ್ನಾಡ್, ಬ್ಲಾಕ್ ಹಿರಿಯ ಉಪಾಧ್ಯಕ್ಷರಾದ ಹಸನಬ್ಬ ಬಾಳ, ಮೋನಪ್ಪ ಶೆಟ್ಟಿ ಎಕ್ಕಾರು, ಬಾಬು ಶೆಟ್ಟಿ ಮಳವೂರು, ಬ್ಲಾಕ್ ಕೋಶಧಿಕಾರಿ ಅಶ್ವಿನಿ ಅಳ್ವಾ, ಯುವ ಕಾಂಗ್ರೆಸ್ ನ ಅಧ್ಯಕ್ಷ ಅಶೋಕ್ ಪೂಜಾರ್, ಬ್ಲಾಕ್ ಎಸ್ಸಿಎಸ್ಟಿ ಘಟಕಾಧ್ಯಕ್ಷ ಚಂದ್ರಶೇಖರ್ ಕಿನ್ನಿಗೋಳಿ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಟಿ.ಎಚ್. ಮಯ್ಯದಿ, ಕಿಸಾನ್ ಘಟಕದ ಅಧ್ಯಕ್ಷ ಸುಧಾಕರ ಏಳಿಂಜೆ, ಹಿಂದುಳಿದ ವರ್ಗಗಳ ಮಾಜಿ ರಾಜ್ಯ ಕಾರ್ಯದರ್ಶಿ ಪ್ರವೀಣ್ ಬೊಳ್ಳೂರು, ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾ ಕೃಷ್ಣಪ್ಪ, ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ, ಕರಾವಳಿ ಪ್ರಾಧಿಕಾರದ ಮಾಜಿ ಸದಸ್ಯ ಸಾಹುಲ್ ಹಮೀದ್ ಕದಿಕೆ ಮೊದಲಾದವರು ಇದ್ದರು.
ಮುಲ್ಕಿ ಬ್ಲಾಕ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಸ್ವಾಗತಿಸಿದರು. ಮುಲ್ಕಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಂಬಾರ ವಂದಿಸಿದರು.