ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಪಾಡಲು ಧಾರ್ಮಿಕ ಗುರುಗಳು, ಚಿಂತಕರ ಆಗ್ರಹ

ಬೆಂಗಳೂರು, ಜೂ.19: ದಿನನಿತ್ಯ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದೌರ್ಜನ್ಯ, ಶೋಷಣೆ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಧಾರ್ಮಿಕ ಗುರುಗಳು, ಚಿಂತಕರು, ಹೋರಾಟಗಾರರು ಆಗ್ರಹಿಸಿದರು.
ರವಿವಾರ ನಗರದ ಕ್ವೀನ್ಸ್ ರಸ್ತೆಯ ದಾರುಸಲಾಂ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಉಳಿಸಿ ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಕುರಿತ ಸಭೆಯಲ್ಲಿ ವಿವಿಧ ಸಂಸ್ಥೆಗಳ ಧಾರ್ಮಿಕ ಗುರುಗಳು, ಚಿಂತಕರು, ಹೋರಾಟಗಾರರು ಭಾಗಿಯಾಗಿ, ಹಕ್ಕೋತ್ತಾಯ ಮಂಡಿಸಿ, ಸಹಿ ಹಾಕಿದರು.
ಸಂವಿಧಾನ ಬದಲಾವಣೆಗೆ ಸಂಚು ನಡೆಯುತ್ತಿದ್ದು, ಇದನ್ನ ಬಲವಾಗಿ ವಿರೋಧಿಸಿ, ರಕ್ಷಣೆ ಮಾಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಅದರಲ್ಲೂ ಇತ್ತೀಚಿಗೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಅವರ ವಿಧಿ-ವಿಧಾನಗಳು, ಧಾರ್ಮಿಕ ಕಟ್ಟಡಗಳು, ಜನರ ಮೇಲೆ ದಾಳಿ ನಡೆಸಲಾಗುತ್ತಿದೆ.ಇಂತಹ ಸಂದರ್ಭದಲ್ಲಿ ಆಡಳಿತ ನಡೆಸುವ ಸರಕಾರಗಳು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಆರ್ಥಿಕವಾಗಿ ಹಿಂದುಳಿದ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಸಹಾಯ ಮಾಡಲು ಪ್ರತಿವೊಬ್ಬರು ಮುಂದಾಗಬೇಕು. ಉದ್ದೇಶ ಪೂರಕವಾಗಿ ಸುಳ್ಳು ಮೊಕದ್ದಮೆ ದಾಖಲಿಸಿ ಕಿರುಕುಳ ನೀಡುವ ವ್ಯವಸ್ಥೆ ವಿರುದ್ಧವೂ ಕಾನೂನು ರೀತಿಯಲ್ಲಿ ಹೋರಾಟ ನಡೆಸಬೇಕು ಎಂದು ಹಕ್ಕೋತ್ತಾಯದಲ್ಲಿ ಉಲ್ಲೇಖಿಸಲಾಯಿತು.
ಸಭೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಮುಹಮ್ಮದ್ ಸಲೀಂ ಇಂಜಿನಿಯರ್, ಅಮೀರೆ ಶರಿಯತ್ ಕರ್ನಾಟಕ ಮೌಲಾನಾ ಸಗೀರ್ ಅಹ್ಮದ್ ರಶಾದಿ, ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಅಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ, ಜಮೀಯತ್ ಎ ಉಲೇಮಾ ಕರ್ನಾಟಕ ಅಧ್ಯಕ್ಷ ಮೌಲಾನಾ ಮುಫ್ತಿ ಇಫ್ತಿಕಾರ್ ಅಹ್ಮದ್ ಖಾಸ್ಮಿ, ಜಮಾಅತೆ ಇಸ್ಲಾಮೀ ಹಿಂದ್ ಕಾರ್ಯದರ್ಶಿ ವಹೀದುದ್ದೀನ್ ಖಾನ್ ಉಮರಿ ಮದನಿ.
ಸಿಟಿ ಜಾಮೀಯಾ ಮಸೀದಿಯ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ, ಬಿಲಾಲ್ ಮಸೀದಿಯ ಝಲ್ಫಿಕರ್ ನೂರಿ, ಜಮೀಯತ್ ಉಲೇಮಾ ಕರ್ನಾಟಕದ ಅಬ್ದುಲ್ ರಹೀಂ, ನಸೀಹ್ ಪಬ್ಲಿಕ್ ಶಾಲೆಯ ಮುಖ್ಯಸ್ಥ ಶಬ್ಬೀರ್ ಅಹ್ಮದ್ ನದ್ವಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.







