ಯೋಗ ದಿನ ಕಾರ್ಯಕ್ರಮ; ಅನುಮತಿಯಿಲ್ಲದೇ ಆಹ್ವಾನ ಪತ್ರಿಕೆಯಲ್ಲಿ ಹೆಸರು ನಮೂದಿಸಿದ್ದಕ್ಕೆ ಡಿಸಿಗೆ ಸಿದ್ದರಾಮಯ್ಯ ತರಾಟೆ

ಬಾಗಲಕೋಟೆ: ತನ್ನ ಅನುಮತಿ ಇಲ್ಲದೆ ವಿಶ್ವ ಯೋಗ ದಿನ ಆಚರಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಿದ್ದಕ್ಕೆ ಬಾಗಲಕೋಟೆ ಜಿಲ್ಲಾಧಿಕಾರಿಯನ್ನು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ.
ಜೂನ್ 21ರಂದು ವಿಶ್ವ ಯೋಗ ದಿನ ಆಚರಣೆ ಭಾಗವಾಗಿ ಇಲ್ಲಿನ ಪಟ್ಟದಕಲ್ಲಿನಲ್ಲಿ ಜಿಲ್ಲಾಡಳಿತ ಆಯೋಜಿಸಿರುವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸಿದ್ದರಾಮಯ್ಯ ಅವರ ಹೆಸರು ಹಾಕಲಾಗಿತ್ತು. ಈ ವಿಚಾರ ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿದ್ದು, ಬಾಗಲಕೋಟೆ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಅವರಿಗೆ ಫೋನ್ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
'ನೀನು ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿ ಅಷ್ಟೇ. ಜಿಲ್ಲಾಧಿಕಾರಿಯಾದ ನೀನು ಸಾರ್ವಜನಿಕರ ಸೇವಕ. ನಾನು ಈ ಕ್ಷೇತ್ರದ ಶಾಸಕ. ನನ್ನ ಕೇಳದೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹೇಗೆ ಹಾಕಿದೆ? ಅವನ್ಯಾರೋ ಮಿನಿಸ್ಟರ್ ಬರ್ತಾನೆ ಅಂತ ನೀನು ಆಹ್ವಾನ ಪತ್ರಿಕೆ ಮಾಡಿ ಕಳಿಸಿಬಿಟ್ರೆ ಆಗುತ್ತಾ? ನೀನು ಈ ಜನರ ಸೇವಕನಾಗಿ ಆಯ್ಕೆಯಾದವನು. ಇವರಿಗೆಲ್ಲ ಯಾರ್ರೀ ಕೆಲಸ ಕೊಟ್ಟವರು' ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.







