ಮುಸ್ಲಿಮರ ಅವಹೇಳನ ಮಾಡಿ ವಾಟ್ಸಪ್ ಸಂದೇಶ ಕಳುಹಿಸಿದ ಬಿಹಾರ ಸರಕಾರದ ಅಧಿಕಾರಿಯ ಬಂಧನ
ಪಾಟ್ನಾ,ಜೂ.19: ಕೋಮು ಭಾವನೆಯನ್ನು ಅಭಿವ್ಯಕ್ತಿಸುವ ವಿಷಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಬಿಹಾರ ಸರಕಾರದ ಹಿರಿಯ ಅಧಿಕಾರಿಯೋರ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದರು.
ಆರ್ಥಿಕ ಅಪರಾಧಗಳ ಘಟಕ (ಇಒಯು)ವು ಆದಾಯ ತೆರಿಗೆ ಕಾಯ್ದೆಯ ವಿವಿಧ ಕಲಮ್ಗಳಡಿ ದಾಖಲಿಸಿರುವ ಎಫ್ಐಆರ್ನ್ನು ಅನುಸರಿಸಿ ಬಿಹಾರ ಆಡಳಿತಾತ್ಮಕ ಸೇವೆಯ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ಶನಿವಾರ ಬಂಧಿಸಲಾಗಿದೆ ಎಂದು ಎಡಿಜಿ ಸಂಜಯ ಸಿಂಗ್ ತಿಳಿಸಿದರು.
ಮುಸ್ಲಿಮರನ್ನು ಅವಹೇಳನ ಮಾಡಿದ್ದ ವಾಟ್ಸ್ಆ್ಯಪ್ ಫಾರ್ವರ್ಡ್ ಕುರಿತು ದೂರಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಇಒಯು, ಪಾಟ್ನಾದಲ್ಲಿ ಚುನಾವಣಾ ಇಲಾಖೆಯಲ್ಲಿ ಉಪ ಕಾರ್ಯದರ್ಶಿಯಾಗಿರುವ ಜಾರ್ಖಂಡ್ ನಿವಾಸಿ ಅಲೋಕ್ ಕುಮಾರ್ ಅವರ ಮೊಬೈಲ್ ಫೋನ್ ನಿಂದ ಸಂದೇಶವು ಫಾರ್ವರ್ಡ್ ಆಗಿದ್ದನ್ನು ಪತ್ತೆ ಹಚ್ಚಿತ್ತು.
ಇಲ್ಲಿಯ ನಿವಾಸದಿಂದ ಅಲೋಕ ಕುಮಾರರನ್ನು ಬಂಧಿಸಿ ಸಚಿವಾಲಯ ಪೊಲೀಸ್ ಠಾಣೆಗೆ ತರಲಾಗಿತ್ತು. ವಿಚಾರಣೆಯ ಬಳಿಕ ಜೈಲಿಗೆ ರವಾನಿಸಲಾಗಿದೆ ಎಂದು ಸಿಂಗ್ ತಿಳಿಸಿದರು.