ಹಿರಿಯ ಸಾಹಿತಿ ಯುಎ ಖಾಸಿಮ್ ಉಳ್ಳಾಲ ನಿಧನ

ಮಂಗಳೂರು, ಜೂ. 20: ಬ್ಯಾರಿ ಅಂದೋಲನದ ರೂವಾರಿಗಳಲ್ಲಿ ಒಬ್ಬರಾದ, ಹಿರಿಯ ಸಾಹಿತಿ ಯುಎ ಖಾಸಿಮ್ ಉಳ್ಳಾಲ (74) ಇಂದು ಮುಂಜಾನೆ ನಗರದಲ್ಲಿರುವ ತನ್ನ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಬ್ಯಾರಿ ಮತ್ತು ಕನ್ನಡ ಭಾಷೆಯಲ್ಲಿ ಕತೆ, ಕಾದಂಬರಿ, ಕವನ, ಲೇಖನಗಳನ್ನು ಬರೆಯುತ್ತಿದ್ದ ಖಾಸಿಮ್ ಅನೇಕ ಕೃತಿಗಳನ್ನು ರಚಿಸಿದ್ದಾರೆ.
ಬ್ಯಾರಿ ಅಂದೋಲನದಲ್ಲಿ ಮುಂಚೂಣಿಯಲ್ಲಿದ್ದ ಖಾಸಿಮ್ ಉಳ್ಳಾಲ, ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯರಾಗಿ, ಕೇಂದ್ರ ಬ್ಯಾರಿ ಪರಿಷತ್ ಮತ್ತು ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಪದಾಧಿಕಾರಿಯಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು.
ಮೃತರ ಅಂತ್ಯಕ್ರಿಯೆಯು ತೊಕ್ಜೊಟ್ಟು ಸಮೀಪದ ಕಲ್ಲಾಪು ಪಟ್ಲದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಯುಎ ಖಾಸಿಮ್ ಅವರು ಬ್ಯಾರಿ ಸಾಹಿತ್ಯ ಚಳವಳಿಯ ರೂವಾರಿಗಳಲ್ಲಿ ಒಬ್ಬರಾಗಿದ್ದರು. ತಮ್ಮ ಕಾದಂಬರಿ, ಸಣ್ಣ ಕತೆಗಳು, ಕವನಗಳು ಹಾಗೂ ನಾಟಕಗಳ ಮೂಲಕ ಬ್ಯಾರಿ ಸಾಹಿತ್ಯವನ್ನು ಶ್ರೀಮಂತ ಗೊಳಿಸಿ, ಬ್ಯಾರಿ ಆಂದೋಲನಕ್ಕೆ ಶಕ್ತಿ ತುಂಬಿದ್ದರು ಎಂದು ಟೀಕೇಸ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಉಮರ್ ಟೀಕೆ ಸಂತಾಪ ವ್ಯಕ್ತಪಡಿಸಿದ್ದಾರೆ ಹಾಗು ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.