ಬಾಲಿವುಡ್ ನಟನ ಡ್ರಗ್ಸ್ ಪ್ರಕರಣ: ವಿದೇಶಿ ರೂಪದರ್ಶಿಗಳಿಗೆ ನೋಟಿಸ್
ಬೆಂಗಳೂರು, ಜೂ.20: ಹೊಟೇಲ್‍ವೊಂದರಲ್ಲಿ ನಡೆದಿದೆ ಎನ್ನಲಾದ ಡ್ರಗ್ಸ್ ಪಾರ್ಟಿ ಪ್ರಕರಣ ಸಂಬಂಧ ಬಾಲಿವುಡ್ ನಟ ಶಕ್ತಿಕಪೂರ್ ಪುತ್ರ ಸಿದ್ದಾಂತ್ ಬಳಿಕ ಮೋಜು ಮಸ್ತಿ ಪಾರ್ಟಿಯಲ್ಲಿದ್ದ ವಿದೇಶಿ ರೂಪದರ್ಶಿಗಳಿಗೆ ಪೂರ್ವ ವಿಭಾಗದ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.
ಪಾರ್ಟಿಯಲ್ಲಿ ಪಾಲ್ಗೊಂಡ ಕೆಲ ವಿದೇಶಿಗರ ವೀಸಾ ಅವಧಿ ಮುಗಿದಿದ್ದು, ಮತ್ತೆ ಕೆಲ ರೂಪದರ್ಶಿಗಳ ವ್ಯವಹಾರದ ಮೇಲೆ ಅನುಮಾನ ಮೂಡಿದ್ದರಿಂದ ಪೊಲೀಸರು ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಮುಂದಾಗಿದ್ದಾರೆ.
ಸುಮಾರು 150 ಮಂದಿಯಿದ್ದ ಪಾರ್ಟಿಗೆ ಡ್ರಗ್ಸ್ ತಂದವರು ಯಾರು ಎನ್ನುವುದನ್ನು ಪತ್ತೆ ಹಚ್ಚಲು ಪೊಲೀಸರು ಅತಿಥಿಗಳ ಪಟ್ಟಿ(ಗೆಸ್ಟ್ ಲಿಸ್ಟ್)ಯನ್ನು ಪಡೆದಿದ್ದಾರೆ. ಗೆಸ್ಟ್ ಲಿಸ್ಟ್ ನಲ್ಲಿರುವ ವಿದೇಶಿ ರೂಪದರ್ಶಿ ಹಾಗೂ ಸೆಲೆಬ್ರಿಟಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಸುಮಾರು 40 ಮಂದಿ ರೂಪದರ್ಶಿಗಳಿಗೆ ನೋಟಿಸ್ ನೀಡಿರುವ ಹಲಸೂರು ಪೊಲೀಸರು, ವಾರದೊಳಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ.
ಪೊಲೀಸರ ನೋಟಿಸ್ ಬೆನ್ನಲ್ಲೇ ಐವರು ವಿಚಾರಣೆಗೆ ಹಾಜರಾಗಿದ್ದು, ಸುಮಾರು 20 ಸಿಸಿಟಿವಿ ಪರಿಶೀಲನೆ ನಡೆಸಿ, ಮಾದಕ ವಸ್ತು ತಂದ ವ್ಯಕ್ತಿ, ಅದನ್ನು ಕಸದ ತೊಟ್ಟಿ ಬಳಿ ಎಸೆದವರು ಯಾರು ಎಂದು ಪರಿಶೀಲನೆ ನಡೆಸಿದರೂ ಕೂಡ ಸ್ಪಷ್ಟತೆ ಸಿಕ್ಕಿಲ್ಲ. ಹೀಗಾಗಿ, ಎಲ್ಲ ಆಯಾಮಗಳಲ್ಲೂ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





