ಅಸ್ಸಾಂನಲ್ಲಿ ಭಾರೀ ಮಳೆ: ಮೃತರ ಸಂಖ್ಯೆ 72ಕ್ಕೆ ಏರಿಕೆ; ನೆರೆ ನೀರಿನಲ್ಲಿ ಕೊಚ್ಚಿ ಹೋದ ಇಬ್ಬರು ಪೊಲೀಸರು

ಅಸ್ಸಾಂ, ಜೂ. 20: ದೇಶದ ವಿವಿಧ ಭಾಗಗಳಲ್ಲಿ ನೈಋತ್ಯ ಮುಂಗಾರು ವಿಸ್ತರಿಸಲಿದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದ ಹೊರತಾಗಿಯೂ ಕೇಂದ್ರ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ರವಿವಾರ ರಾತ್ರಿ ನೆರೆ ನೀರಿಗೆ ಇಬ್ಬರು ಪೊಲೀಸ್ ಸಿಬ್ಬಂದಿ ಕೊಚ್ಚಿಕೊಂಡು ಹೋಗಿದ್ದಾರೆ.
ಪ್ರಕರಣದ ತನಿಖೆ ನಡೆಸಲು ಕಾಮರೂಪ್ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯ ತಂಡವೊಂದು ಸ್ಥಳಕ್ಕೆ ತೆರಳಿತ್ತು. ನೆರೆಯಲ್ಲಿ ಉಸ್ತುವಾರಿ ಪೊಲೀಸ್ ಅಧಿಕಾರಿ ಸಮುಜ್ಜಾಲ್ ಕಾಕಾಟಿ ಸೇರಿದಂತೆ ಇಬ್ಬರು ನೆರೆಗೆ ಕೊಚ್ಚಿ ಹೋಗಿದ್ದಾರೆ ಎಂದು ವರದಿ ಹೇಳಿದೆ.
ಅಸ್ಸಾಂನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಸಂಭವಿಸಿದ ದುರಂತಗಳಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ 72ಕ್ಕೆ ಏರಿಕೆಯಾಗಿದೆ. 40 ಲಕ್ಷಕ್ಕೂ ಅಧಿಕ ಜನರು ಸಂತ್ರಸ್ತರಾಗಿದ್ದಾರೆ ಎಂದು ವರದಿ ತಿಳಿಸಿದೆ. ಮೇಘಾಲಯದಲ್ಲಿ ಕಳೆದ ಎರಡು ತಿಂಗಳಲ್ಲಿ ಸಂಭವಿಸಿದ ನೆರೆ ಹಾಗೂ ಭೂಕುಸಿತದಿಂದ 30 ಮಂದಿ ಸಾವನ್ನಪ್ಪಿದ್ದಾರೆ.
ಅಸ್ಸಾಂ ಹಾಗೂ ಮೇಘಾಲಯದಲ್ಲಿ ಕಳೆದ 24 ಗಂಟೆಗಳಲ್ಲಿ ಭಾರೀ ಮಳೆ ಸುರಿಯಲಿದೆ. ಈಶಾನ್ಯ ಭಾರತದ ಉಳಿದ ಭಾಗಗಳು, ಸಿಕ್ಕಿಂನಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮ್ಯಾಟ್ ವೆದರ್ ಸೂಚಿಸಿತ್ತು.
ಈ ನಡುವೆ ನೈಋತ್ಯ ಮುಂಗಾರು ಮಧ್ಯಪ್ರದೇಶದ ಹೆಚ್ಚಿನ ಭಾಗಗಳು, ಚತ್ತೀಸ್‌ಗಢ ಹಾಗೂ ಆಂಧ್ರಪ್ರದೇಶದ ಕರಾವಳಿ, ಸಂಪೂರ್ಣ ಒಡಿಸ್ಸಾ ಹಾಗೂ ಪಶ್ಚಿಮಬಂಗಾಳದ ಗಂಗಾ ತೀರದ ಉಳಿದ ಭಾಗಗಳು, ಜಾರ್ಖಂಡ್ ಹಾಗೂ ಬಿಹಾರದ ಹೆಚ್ಚಿನ ಭಾಗಗಳು, ಆಗ್ನೇಯ ಉತ್ತರಪ್ರದೇಶದ ಕೆಲವು ಭಾಗಗಳಲ್ಲಿ ವಿಸ್ತರಿಸಲಿದೆ ಎಂದು ಭಾರತದ ಹವಾಮಾನ ಇಲಾಖೆ ಸೋಮವಾರ ಪ್ರಕಟಿಸಿದೆ.
ಮುಂದಿನ 5 ದಿನಗಳಲ್ಲಿ ಪಶ್ಚಿಮ ಕರಾವಳಿಯಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಭಾರತದ ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ ಎರಡು ದಿನಗಳಲ್ಲಿ ಉತ್ತರ ಕೇಂದ್ರ ಹಾಗೂ ಪೂರ್ವ ಭಾರತದ ಅಲ್ಲಲ್ಲಿ ಗುಡುಗಿನಿಂದ ಕೂಡಿದ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂಬೈ ಹಾಗೂ ಥಾಣೆಯಲ್ಲಿ ಮಂಗಳವಾರದ ವರೆಗೆ ಭಾರೀ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.