'ಅಗ್ನಿಪಥ್' ಯೋಜನೆ ಜಾರಿ ಬೇಡ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ
ಬೆಂಗಳೂರು, ಜೂ.20: ಸೈನಿಕರ ಅಲ್ಪಾವಧಿ ನೇಮಕಾತಿಗೆ ಜಾರಿಗೆ ತರಲು ಉದ್ದೇಶಿಸಿರುವ ಅಗ್ನಿಪಥ ಯೋಜನೆಯನ್ನು ಕೇಂದ್ರ ಸರಕಾರ ಕೂಡಲೇ ಕೈಬಿಡಬೇಕು. ಖಾಸಗೀಕರಣ ಬಲಿಷ್ಠ ಮಾಡುವ ಉದ್ದೇಶದಿಂದ ಕೇಂದ್ರ ಸರಕಾರವು ಈ ಯೋಜನೆಗೆ ಮುಂದಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರು ತಾಹಿರ್ ಹುಸೇನ್ ಆರೋಪಿಸಿದ್ದಾರೆ.
ಯುವಕರಿಗೆ ಉದ್ಯೋಗ ನೀಡುವ ಬದಲು ನಿರುದ್ಯೋಗ ಹೆಚ್ಚಿಸುವ ಕೆಲಸವು ಮೋದಿ ನೇತೃತ್ವದ ಬಿಜೆಪಿಯ ಕೇಂದ್ರ ಸರಕಾರ ಮಾಡುತ್ತಿದೆ. ಅಗ್ನಿಪಥ ಪ್ರಕ್ರಿಯೆಯಲ್ಲಿ ಮೀಸಲಾತಿ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಅಗ್ನಿಪಥ ಯೋಜನೆ ಅನುಷ್ಠಾನದಿಂದ ಯುವಕರಿಗೆ ಅನ್ಯಾಯವಾಗುತ್ತದೆ. ರಕ್ಷಣಾ ಇಲಾಖೆಯನ್ನು ಖಾಸಗೀಕರಣದ ಹೆಸರಲ್ಲಿ ಕೇಸರೀಕರಣ ಮಾಡುವ ಕೆಲಸಕ್ಕೆ ಮೋದಿ ನೇತೃತ್ವದ ಕೇಂದ್ರ ಸರಕಾರವು ಕೈ ಹಾಕಿದೆ ಎಂದು ಅವರು ದೂರಿದ್ದಾರೆ.
ರಕ್ಷಣಾ ಇಲಾಖೆಯಲ್ಲಿ 30 ವರ್ಷಗಳ ಕಾಲ ದುಡಿದು ನಿವೃತ್ತಿ ಪಡೆದು ಹೊರ ಬಂದವರಿಗೆ ಯಾವುದೇ ಉದ್ಯೋಗವನ್ನು ನೀಡಿಲ್ಲ. ಸೇನೆಯಿಂದ ನಿವೃತ್ತಿ ಪಡೆದು ಬಂದಿರುವ ಜಿಲ್ಲೆಯ 16 ಸಾವಿರ ಮಂದಿ ಸೈನಿಕರಿಗೆ ಜಿಲ್ಲಾ ಸೈನಿಕ ಕಲ್ಯಾಣ ಇಲಾಖೆ ಯಾವುದೇ ಕೆಲಸ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.
ನಾಲ್ಕು ವರ್ಷಗಳ ಕಾಲ ಸೈನಿಕರಾಗಿ ಸೇವೆ ಸಲ್ಲಿಸುವ ಎಸೆಸೆಲ್ಸಿ ಅರ್ಹತೆ ಹೊಂದಿದವರಿಗೆ ಸೈನಿಕರಾಗಿ ದುಡಿಯುವವರಿಗೆ ಪಿಯುಸಿ ಪ್ರಮಾಣ ಪತ್ರ ನೀಡುತ್ತೇವೆ ಎಂದು ಹೇಳಿದ್ದೀರಿ, ಇದು ಸರಿ. ಆದರೆ ಅಗ್ನಿವೀರ ಪ್ರಮಾಣಪತ್ರ ನೀಡುತ್ತೇವೆ ಎಂದು ಹೇಳುತ್ತಿದ್ದೀರಿ ಇದು ಎಷ್ಟು ಸರಿ ಎಂದು ತಾಹಿರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಯುವಕರು ಹಿಂಸೆಮಾರ್ಗ ತೊರೆದು ಶಾಂತಿಯುತ ರೀತಿಯಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಬೇಕು. ಸರಕಾರದ ಆಸ್ತಿಪಾಸ್ತಿಗೆ ಹಾನಿ ಮಾಡಬಾರದು ಎಂದು ತಾಹಿರ್ ಹುಸೇನ್ ಮನವಿ ಮಾಡಿದ್ದಾರೆ.
ರಾಷ್ಟ್ರದ್ಯಂತ ಪ್ರತಿಭಟನೆ ಮತ್ತು ಹಿಂಚಾರ ನಡೆಯುತ್ತಿದ್ದರೂ ಸರಕಾರ ಹಠ ಬಿಡದೆ ಯೋಜನೆ ಜಾರಿ ಮಾಡಲು ಮುಂದಾಗಿರುವುದು ಖಂಡನಿಯ. ಸರಕಾರ ತಕ್ಷಣ ಪ್ರತಿಭಟನಾ ನಿರತರನ್ನು ಕರೆದು ಅಹವಾಲು ಕೇಳಿ ಅವರಿಗೆ ಸಮಾಧಾನ ಪಡಿಸುವ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅಗ್ನಿಪಥ ಹೆಸರಲ್ಲಿ ಕೇಸರೀಕರಣ ಮಾಡುವ ಹುನ್ನಾರ ಮಾಡುತ್ತಿದ್ದೀರಿ. ಇದರಿಂದ ದೇಶದ ಭದ್ರತೆಗೆ ಧಕ್ಕೆ ಬರಲಿದೆ. ರಕ್ಷಣಾ ಇಲಾಖೆಯಲ್ಲಿ ಖಾಸಗೀಕರಣ ಮಾಡುವ ಕೆಲಸವನ್ನು ಕೂಡಲೇ ಕೈಬಿಡಿ. ದೇಶದ ಜನರ ದಿಕ್ಕು ತಪ್ಪಿಸುವ ಯೋಜನೆ ಜಾರಿಗೆ ಸರಕಾರ ಮುಂದಾಗಬಾರದು ಎಂದು ತಾಹಿರ್ ಹುಸೇನ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.







