ಬೆಳೆ ಸಾಲ ಪಡೆದ ರೈತರಿಗೆ ವಿಮೆ ಮಾಡಿಸಲು ಚಿಂತನೆ: ಡಾ.ಎಂ.ಎನ್ .ರಾಜೇಂದ್ರ ಕುಮಾರ್
ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳ ಸಮಾಲೋಚನಾ ಸಭೆ, ಅಭಿವಂದನಾ ಕಾರ್ಯಕ್ರಮ

ಮಂಗಳೂರು: ಬೆಳೆ ಸಾಲ ಪಡೆದ ರೈತನಿಗೆ ವಿಮಾ ಯೋಜನೆಯನ್ನು ಮಾಡಿಸುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‍ಸಿಡಿಸಿಸಿ ಬ್ಯಾಂಕ್) ಚಿಂತನೆ ನಡೆಸಿದೆ ಎಂದು ಬ್ಯಾಂಕ್‍ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ನಗರದ ಎಸ್‍ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ನಡೆದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳ ಸಮಾಲೋಚನಾ ಸಭೆ ಹಾಗೂ ಸಹಕಾರಿ ಸಂಘಗಳ ನಿಬಂಧಕರಾದ ಎಸ್.ಜಿಯಾವುಲ್ಲಾ ಅವರಿಗೆ ಅಭಿವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರಾಜೇಂದ್ರ ಕುಮಾರ್ ಮಾತನಾಡಿದರು.
ಕೃಷಿ ಬೆಳೆ ಸಾಲ ಮಾಡಿದ ರೈತ ಅಕಾಲಿಕ ಮೃತಪಟ್ಟರೆ ಅವರ ಕುಟುಂಬಕ್ಕೆ ಭವಿಷ್ಯದಲ್ಲಿ ಹೊರೆಯಾಗಬಾರದು ಎಂಬ ಚಿಂತನೆಯಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ. ಇದರಿಂದ ಸಾಲ ಮಾಡಿದ ರೈತ ಮೃತಪಟ್ಟರೂ ಸಾಲದ ಹೊರೆ ರೈತನ ಕುಟುಂಬಕ್ಕೆ ಬಾರದಂತೆ ಈ ವಿಮೆ ಆಧಾರವಾಗುತ್ತದೆ. ಇದರಿಂದ ಯಾವುದೇ ರೈತನ ಹೊರೆಯನ್ನು ಕುಟುಂಬಕ್ಕೆ ಬಿಟ್ಟು ಹೋಗದಂತೆ ಈ ವಿಮೆ ಅವರ ಕುಟುಂಬಕ್ಕೆ ರಕ್ಷಣೆ ನೀಡಲಿದೆ ಎಂದು ಅವರು ತಿಳಿಸಿದರು.
ದಕ್ಷಿಣ ಕನ್ನಡ ಹಾಗೂ ಕರಾವಳಿ ಜಿಲ್ಲೆಯ ರೈತರು ಉಳಿದ ಜಿಲ್ಲೆಗಳಿಗಿಂತ ಹೆಚ್ಚು ಸದೃಢರು. ಇಲ್ಲಿನ ಕೃಷಿ ಪತ್ತಿನ ಸಹಕಾರಿ ಸಂಘಗಳು ಹೆಚ್ಚು ಕ್ರಿಯಾಶೀಲವಾಗಿರುವುದರಿಂದ ಯಾವುದೇ ರೈತನಿಗೆ ಸಾಲ ಸಿಗಲಿಲ್ಲ ಎನ್ನುವ ಕೊರಗು ಇಲ್ಲಿಲ್ಲ. ಈ ಕಾರಣದಿಂದ ನಮ್ಮ ಭಾಗದಲ್ಲಿ ಯಾವುದೇ ರೈತ ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿದ ಉದಾಹರಣೆ ಇಲ್ಲ. ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಸಾಲಗಾರ ರೈತರ ಕುಟುಂಬದವರಿಗೂ ನಾವು ಒಂದು ಲಕ್ಷ ರೂ. ಪರಿಹಾರವನ್ನು ನೀಡಿದ್ದೇವೆ ಎಂದು ಅವರು ತಿಳಿಸಿದರು.
ಆರ್ ಸಿ ಎಸ್ ಝಿಯಾವುಲ್ಲಾ ಅವರಿಗೆ ಅಭಿನಂದನೆ : ಈ ತಿಂಗಳ ಅಂತ್ಯಕ್ಕೆ ನಿವೃತ್ತರಾಗಲಿರುವ ಸಹಕಾರ ಸಂಘಗಳ ನಿಬಂಧಕರಾದ ಎಸ್. ಝಿಯಾವುಲ್ಲಾ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ಅಭಿವಂದನೆ ಸ್ವೀಕರಿಸಿ ಮಾತನಾಡಿದ ಅವರು, ಎರಡು ವರ್ಷಗಳ ಹಿಂದೆ ಸಹಕಾರಿ ಇಲಾಖೆಗೆ ನಿಬಂಧಕನಾಗಿ ಸೇರ್ಪಡೆಗೊಂಡು ಇಲಿನ ಕಾರ್ಯಚಟುವಟಿಕೆಗಳ ಬಗ್ಗೆ ಆಳವಾಗಿ ತಿಳಿದುಕೊಂಡಿದ್ದೇನೆ. ರಾಜ್ಯದ 21 ಡಿಸಿಸಿ ಬ್ಯಾಂಕ್‍ಗಳ ಪೈಕಿ ಎಸ್‍ಸಿಡಿಸಿಸಿ ಬ್ಯಾಂಕ್ ಎಲ್ಲರಿಗೂ ಮಾದರಿಯಾದ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಇಲ್ಲಿನ ವ್ಯವಸ್ಥೆ, ರೈತರಿಗೆ ನೀಡುತ್ತಿರುವ ಸವಲತ್ತು ಎಲ್ಲ ಸಹಕಾರಿ ಸಂಘಗಳಿಗೆ ಮಾದರಿಯಾದದ್ದು . ರಾಜೇಂದ್ರ ಕುಮಾರ್ ಇಲ್ಲಿನ ಸಹಕಾರಿ ವ್ಯವಸ್ಥೆಗೆ ಪೂರಕವಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಇಲ್ಲಿನ ಸಹಕಾರಿ ಸಂಘಗಳು ಸದೃಢವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಸಹಕಾರ ಸಂಘಗಳ ನಿಬಂಧಕರು ಮೆಚ್ಚುಗೆ ಸೂಚಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಬೆಂಗಳೂರಿನ ಸಹಕಾರಿ ಸಂಘಗಳ ಹೆಚ್ಚುವರಿ ನಿಬಂಧಕ ರಾದ ಎ.ಸಿ. ದಿವಾಕರ್ ಮಾತನಾಡಿ, ಎಸ್‍ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಸಹಕಾರ ರಂಗದ ಸುಧಾರಣೆ ನಿಟ್ಟಿನಲ್ಲಿ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವರು ಸರಕಾರಕ್ಕೆ, ಇಲಾಖೆಗೆ ಕೊಡುವ ಸಲಹೆ, ಪ್ರಸ್ತಾಪಗಳು ಸಹಕಾರಿ ತತ್ವಗಳ ಬೆಳವಣಿಗೆಯಲ್ಲಿ ಹೆಚ್ಚು ಸೂಕ್ತವಾಗಿರುತ್ತದೆ ಎಂದು ಅವರು ತಿಳಿಸಿದರು.
ಎಂಎನ್ಆರ್ ಗೆ ಸನ್ಮಾನ : ಈ ಸಮಾರಂಭದಲ್ಲಿ ಬ್ಯಾಂಕ್ ಅಧ್ಯಕ್ಷ ಡಾಎಂಎನ್ ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಈಚೆಗೆ ದುಬೈಯಲ್ಲಿ ಮೈಲ್ ಸ್ಟೋನ್ ಗ್ಲೋಬಲ್ ಅವಾರ್ಡ್ ನ್ನು ಸ್ವೀಕರಿಸಿದ ರಾಜೇಂದ್ರ ಕುಮಾರ್ ಅವರನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪರವಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮೈಸೂರು ವಿಭಾಗದ ಸಹಕಾರಿ ಅಧಿಕಾರಿಗಳ ಪರವಾಗಿಯೂ ರಾಜೇಂದ್ರ ಕುಮಾರ್ ಅವರನ್ನು ಸಹಕಾರ ಸಂಘಗಳ ನಿಬಂಧಕ ಎಸ್. ಜಿಯಾವುಲ್ಲಾ ಅವರು ಸನ್ಮಾನಿಸಿದರು.
ಎಸ್‍ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಬಿ.ನಿರಂಜನ್, ರಾಜಾ ರಾಮ್ ಭಟ್, ಭಾಸ್ಕರ್ ಎಸ್.ಕೋಟ್ಯಾನ್ ಮೋನಪ್ಪ ಶೆಟ್ಟಿ ಎಕ್ಕಾರು, ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಶಶಿಕುಮಾರ್ ರೈ.ಬಾಲ್ಯೊಟ್ಟು, ಎಸ್. ಬಿ.ಜಯರಾಮ್ ರೈ., ಎಂ.ಮಹೇಶ್ ಹೆಗ್ಡೆ, ಕೆ.ಜೈರಾಜ್ ರೈ, ಬಿ.ಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ರಾವ್, ಸದಾಶಿವ ಉಳ್ಳಾಲ್, ಬ್ಯಾಂಕ್‍ನ ಸಿಇಒ ರವೀಂದ್ರ ಬಿ. ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಪ್ರವೀಣ್ ಬಿ. ನಾಯಕ್ ಸ್ವಾಗತಿಸಿ ವಂದಿಸಿದರು. ಬ್ಯಾಂಕ್‍ನ ಮಹಾ ಪ್ರಬಂದಕ ಗೋಪಿನಾಥ್ ಭಟ್ ಕಾರ್ಯಕ್ರಮ ನಿರೂಪಿಸಿದರು.







