ವಹಿವಾಟನ್ನು ಕಡಿತಗೊಳಿಸುತ್ತೇವೆಂದು ಹೇಳಿದ ಬಳಿಕವೂ ರಷ್ಯಾದಿಂದ ಕಲ್ಲಿದ್ದಲು ಖರೀದಿಸಿದ ಟಾಟಾ ಸ್ಟೀಲ್ಸ್: ವರದಿ
ಹೊಸದಿಲ್ಲಿ: ಭಾರತದ ಅಗ್ರ ಉಕ್ಕು ತಯಾರಕ ಟಾಟಾ ಸ್ಟೀಲ್ ಮೇ ತಿಂಗಳ ದ್ವಿತೀಯಾರ್ಧದಲ್ಲಿ ರಷ್ಯಾದಿಂದ ಸುಮಾರು 75,000 ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿರುವುದಾಗಿ ndtv.com ವರದಿ ಮಾಡಿದೆ. ರಷ್ಯಾದೊಂದಿಗೆ ವ್ಯಾಪಾರವನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ ಕೆಲವೇ ವಾರಗಳಲ್ಲಿ ಈ ಆಮದು ಪ್ರಕ್ರಿಯೆ ನಡೆದಿದೆ ಎಂಬ ಮಾಹಿತಿ ಹೊರಗೆ ಬಿದ್ದಿದೆ.
ಭಾರತ, ಯುನೈಟೆಡ್ ಕಿಂಗ್‌ಡಮ್ ಮತ್ತು ನೆದರ್‌ಲ್ಯಾಂಡ್‌ನಲ್ಲಿರುವ ತನ್ನ ಎಲ್ಲಾ ಉತ್ಪಾದನಾ ಘಟಕಗಳು ರಷ್ಯಾದ ಮೇಲಿನ ಅವಲಂಬನೆಯನ್ನು ಕೊನೆಗೊಳಿಸಲು ಕಚ್ಚಾ ವಸ್ತುಗಳ ಪರ್ಯಾಯ ಮೂಲಗಳ ಮೊರೆ ಹೋಗಿದೆ ಎಂದು ಟಾಟಾ ಸ್ಟೀಲ್ ಏಪ್ರಿಲ್‌ನಲ್ಲಿ ತಿಳಿಸಿತ್ತು. "ರಷ್ಯಾದೊಂದಿಗೆ ವ್ಯಾಪಾರವನ್ನು ನಿಲ್ಲಿಸಲು ನೋಡುತ್ತಿದ್ದು, ಪ್ರಜ್ಞಾಪೂರ್ವಕವಾಗಿ ನಿರ್ಧಾರವನ್ನು ತೆಗೆದುಕೊಳ್ಳುತ್ತಿದೆ" ಎಂದು ಸಂಸ್ಥೆ ಹೇಳಿತ್ತು.
ಆದಾಗ್ಯೂ, ಮೇ ತಿಂಗಳಲ್ಲಿ, ಟಾಟಾ ಸ್ಟೀಲ್ ಸುಮಾರು 75,000 ಟನ್‌ಗಳಷ್ಟು PCI ಕಲ್ಲಿದ್ದಲನ್ನು ಉಕ್ಕು ತಯಾರಿಕೆಗೆ ಬಳಸಿತ್ತು. ಅದನ್ನು ರಷ್ಯಾದ ವ್ಯಾನಿನೊ ಬಂದರಿನಿಂದ ತರಿಸಿದ್ದು, ಅದರಲ್ಲಿ 42,000 ಟನ್‌ಗಳು ಮೇ 18 ರಂದು ಪ್ಯಾರಾಡಿಶಿಯಾ ದ್ವೀಪದ ಬಂದರಿಗೆ ಮತ್ತು 32,500 ಟನ್‌ಗಳು ಹಲ್ಡಿಯಾ ಬಂದರಿಗೆ ತಲುಪಿದೆ ಎಂದು ಹೆಸರು ಬಹಿರಂಗ ಪಡಿಸಲಿಚ್ಛಿಸದ ವ್ಯಾಪಾರಿ ಮೂಲ ತಿಳಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಅದಾಗ್ಯೂ, ರಷ್ಯಾದಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಒಪ್ಪಂದವನ್ನು ಕಂಪನಿಯು ರಷ್ಯಾದೊಂದಿಗೆ ವ್ಯಾಪಾರ ಸಂಬಂಧವನ್ನು ಕಡಿತಗೊಳಿಸುವುದಾಗಿ ಘೋಷಿಸುವ ಮೊದಲು ಮಾಡಲಾಗಿತ್ತು ಎಂದು ಟಾಟಾ ಸ್ಟೀಲ್ ವಕ್ತಾರರು ತಿಳಿಸಿದ್ದಾರೆ.
"ಟಾಟಾ ಸ್ಟೀಲ್ ಪ್ರಕಟಣೆಯ ನಂತರ ರಷ್ಯಾದಿಂದ ಯಾವುದೇ ಪಿಸಿಐ ಕಲ್ಲಿದ್ದಲನ್ನು ಖರೀದಿಸಿಲ್ಲ" ಎಂದು ವಕ್ತಾರರು ರಾಯಿಟರ್ಸ್‌ಗೆ ಇಮೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉಕ್ರೇನ್ ಮೇಲೆ ಮಿಲಿಟರಿ ದಾಳಿ ಮಾಡಿರುವ ರಷ್ಯಾದೊಂದಿಗೆ ರಾಜಕೀಯ ಸಂಬಂಧಗಳನ್ನು ಹೊಂದಿರುವ ಭಾರತ ರಷ್ಯಾವನ್ನು ಖಂಡಿಸುವುದರಿಂದ ದೂರವುಳಿದಿತ್ತು. ಭಾರತವು ತನ್ನ ಪೂರೈಕೆಯನ್ನು ವೈವಿಧ್ಯಗೊಳಿಸಲು ರಷ್ಯಾದ ಸರಕುಗಳ ಖರೀದಿಯನ್ನು ಸಮರ್ಥಿಸಿಕೊಂಡಿತ್ತು, ಅಲ್ಲದೆ, ಹಠಾತ್ ಸ್ಥಗಿತವು ಬೆಲೆಗಳನ್ನು ಹೆಚ್ಚಿಸುತ್ತದೆ ಮತ್ತು ಅದು ಗ್ರಾಹಕರಿಗೆ ಹೊರೆಯಾಗುತ್ತದೆ ಎಂದು ವಾದಿಸಿತ್ತು.
ಆದರೆ, ಟಾಟಾ ಸ್ಟೀಲ್ ಮಾತ್ರ ರಷ್ಯಾದೊಂದಿಗೆ ವ್ಯವಹಾರವನ್ನು ನಿಲ್ಲಿಸುವುದಾಗಿ ಘೋಷಿಸಿತ್ತು. ಅದಾಗ್ಯೂ, ರಾಯಿಟರ್ಸ್ ಪರಿಶೀಲಿಸಿದ ವ್ಯಾಪಾರದ ಮಾಹಿತಿಯ ಪ್ರಕಾರ ಇತರೆ ಭಾರತೀಯ ಉಕ್ಕು ತಯಾರಕ ಸಂಸ್ಥೆಗಳು ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತಿದೆ.
ವ್ಯಾಪಾರ ಮೂಲಗಳ ಪ್ರಕಾರ, PCI ಕಲ್ಲಿದ್ದಲನ್ನು ಪನಾಮ್ಯಾಕ್ಸ್ ಆಸ್ಟ್ರಿಯಾ ಹೆಸರಿನ ಹಡಗಿನಲ್ಲಿ ಆಮದು ಮಾಡಿಕೊಳ್ಳಲಾಗಿದೆ. ಟಾಟಾ ಸ್ಟೀಲ್ ಮೇ ತಿಂಗಳಲ್ಲಿ ರಷ್ಯಾದಿಂದ 75,000 ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಂಡಿದೆ ಎಂದು ಅಧಿಕೃತ ಮೂಲಗಳು ಖಚಿತಪಡಿಸಿವೆ, ಆದರೆ ಹೆಚ್ಚಿನ ವಿವರಗಳನ್ನು ನೀಡಿಲ್ಲ ಎಂದು ವರದಿಯಾಗಿದೆ.
ಮಾಸ್ಕೋದ ಮೇಲೆ ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳ ಹೊರತಾಗಿಯೂ, ಇತ್ತೀಚಿನ ವಾರಗಳಲ್ಲಿ ಭಾರತೀಯ ಉಕ್ಕು ತಯಾರಕರಿಂದ ರಷ್ಯಾದ ಕಲ್ಲಿದ್ದಲಿನ ಖರೀದಿಗಳು ಹೆಚ್ಚಿವೆ, ಕಲ್ಲಿದ್ದಲು ವ್ಯಾಪಾರಿಗಳು 30% ವರೆಗೆ ರಿಯಾಯಿತಿಗಳನ್ನು ನೀಡುತ್ತಿದ್ದಾರೆ ಎಂದು ರಾಯಿಟರ್ಸ್ ಶನಿವಾರ ವರದಿ ಮಾಡಿದೆ.
ಭಾರತೀಯ ಉಕ್ಕು ತಯಾರಕರಿಗೆ ಅಗ್ಗದ ಕಲ್ಲಿದ್ದಲಿನ ಪೂರೈಕೆಯು ಈಗ ಅನಿವಾರ್ಯವಾಗಿದ್ದು, ದೇಶೀಯ ಹಣದುಬ್ಬರವನ್ನು ನಿಗ್ರಹಿಸಲು ಕಳೆದ ತಿಂಗಳು ಭಾರತ ಸರ್ಕಾರವು ವಿಧಿಸಿದ ರಫ್ತು ಸುಂಕಗಳಿಂದ ವಿನಾಯಿತಿ ನೀಡಲಾಗುತ್ತಿರುವ ಹೊರೆಯನ್ನು ತಗ್ಗಿಸಲು ಉಕ್ಕು ತಯಾರಕ ಕಂಪೆನಿಗಳು ರಷ್ಯಾದ ಅಗ್ಗದ ಕಲ್ಲಿದ್ದಲನ್ನು ಬಳಸುತ್ತಿದೆ ಎಂದು ವರದಿಯಾಗಿದೆ.