ಲೇಡಿಹಿಲ್‌ನಿಂದ ಉರ್ವ ಮಾರಿಗುಡಿವರೆಗೆ ಸಸಿ ನೆಡುವ ಕಾರ್ಯಕ್ರಮ

ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ಮತ್ತು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಸ್ಮಾರ್ಟ್ ಸಿಟಿ ಮಿಷನ್ ಏಳು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಎಲ್ಲಾ ೧೦೦ ನಗರದ ಸ್ಮಾರ್ಟ್ ಸಿಟಿಗಳಲ್ಲಿ ‘ಸಬ್ಕಾ ಭಾರತ್, ನಿಖರ್ತಾ ಭಾರತ್’ ಪರಿಕಲ್ಪನೆಯಡಿಯಲ್ಲಿ ವಿವಿಧ ಕಾರ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅದರಂತೆ ಬುಧವಾರ ನಗರದ ಲೇಡಿಹಿಲ್ ಬಳಿಯಿಂದ ಉರ್ವ ಮಾರಿಗುಡಿವರೆಗೆ ಸಸಿಗಳನ್ನು ನೆಡುವ ಕಾರ್ಯಕ್ರಮ ನಡೆಯಿತು.
ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಸ್ಮಾರ್ಟ್ ಸಿಟಿಯಡಿ ನಗರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ ಕಾರ್ಯ ಕಳೆದ ಏಳು ವರ್ಷಗಳಿಂದ ಸಾಗುತ್ತಿದೆ. ಮೋದಿಯವರ ಯೋಜನೆ ಮತ್ತು ಯೋಚನೆಯಂತೆ ಕಾರ್ಯಗಳು ಸಾಗುತ್ತಿವೆ. ಮಂಗಳೂರು ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿ ಏಳುವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಯನ್ನು ಕೂಡ ವಿವಿಧ ಕಾರ್ಯಕ್ರಮಗಳ ಮೂಲಕ ಆಯೋಜಿಸಲಾಗಿದೆ ಎಂದರು.
೭ ಸಂಖ್ಯೆಯನ್ನು ಸಾಂಕೇತಿಕವಾಗಿಸಿ ಏಳು ದಿನ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸಸಿ ನೆಡುವ ಕಾರ್ಯಕ್ರಮ, ಕ್ರಿಕೆಟ್, ಬೀದಿ ನಾಟಕ, ಸ್ವಚ್ಛಭಾರತ್ ಹೀಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಏಳು ಓವರಿನ ಕ್ರಿಕೆಟ್ ಮ್ಯಾಚ್ ನಡೆಯಲಿದುದ ಏಳು ತಂಡಗಳು ಭಾಗವಹಿಸಲಿವೆ. ಪ್ರತಿ ಓವರ್‌ನಲ್ಲಿ ಏಳು ಬಾಲ್, ಏಳೂ ಬಾಲ್ ಕೂಡ ವಿವಿಧ ಬಣ್ಣಗಳಿಂದ ಇರಲಿದ್ದು, ವಿನೂತನ ರೀತಿಯಲ್ಲಿ ಪಂದ್ಯಾಟ ನಡೆಯಲಿದೆ ಎಂದವರು ಹೇಳಿದರು.
ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ದೇಶದ ಚುಕ್ಕಾಣಿ ಹಿಡಿದ ಪ್ರಧಾನಿ ಮೋದಿ ೮ ವರ್ಷ ಪೂರೈಸುತ್ತಿದ್ದು, ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಮೋದಿಯವರ ನೇತೃತ್ವದಲ್ಲಿ ದೇಶದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಸ್ಮಾರ್ಟ್ ಸಿಟಿಯಡಿ ಮಂಗಳೂರಿನಲ್ಲೂ ಅಮೂಲಾಗ್ರ ಅಭಿವೃದ್ಧಿ ಕೆಲಸಗಳಾಗಿವೆ. ಜೂ.೧೯ರಿಂದ ಜೂ.೨೫ರವರೆಗೆ ವಿವಿಧಡ ಕಾರ್ಯಕ್ರಮ ಹಮ್ಮಿಕೊಂಡು ವಿನೂತನ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಜೂ.೨೩ರಂದು ಸಾಮಾಜಿಕ ಜಾಗೃತಿ ಕುರಿತು ಬೀದಿನಾಟಕ, ಜೂ.೨೪ರಂದು ಸ್ವಚ್ಛಭಾರತ ಕಾರ್ಯಕ್ರಮ ಮತ್ತು ಕ್ರಿಕೆಟ್ ಪಂದ್ಯಾಟ, ಜೂ.೨೫ರಂದು ಉರ್ವ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದವರು ಹೇಳಿದರು.
ಈ ಸಂದರ್ಭ ಉಪಮೇಯರ್ ಸುಮಂಗಳಾ ರಾವ್, ಮಾಜಿ ಮೇಯರ್ ದಿವಾಕರ, ಸ್ಮಾರ್ಟ್ ಸಿಟಿ ಅಧಿಕಾರಿ ಅರುಣ್ ಪ್ರಭ, ಸ್ಮಾರ್ಟ್ ಸಿಟಿ ನಿರ್ದೇಶಕ ಸುಧೀರ್ ಶೆಟ್ಟಿ ಕಣ್ಣೂರು, ಇಂಜಿನಿಯರ್ ಲಿಂಗೇಗೌಡ, ಮೂಡಾ ಅಧ್ಯಕ್ಷ ರವಿಶಂಕರ ಮಿಜಾರು, ಕೆಎಫ್‌ಡಿಸಿ ಅಧ್ಯಕ್ಷ ನಿತಿನ್ ಕುಮಾರ್, ಕಾರ್ಪೋರೇಟರ್ ಗಣೇಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.