‘ಅಗ್ನಿವೀರ’ರಿಗೆ ವಸತಿ ಶಾಲೆಗಳ ದೈಹಿಕ ಶಿಕ್ಷಕ ಹುದ್ದೆ ಮೀಸಲಾತಿಗೆ ಚಿಂತನೆ: ಕೋಟ ಶ್ರೀನಿವಾಸ ಪೂಜಾರಿ
ಉಡುಪಿ : ಕೇಂದ್ರ ಸರಕಾರದ ಅಗ್ನಿಪಥ ಯೋಜನೆಗೆ ಸಂಬಂಧಿಸಿದಂತೆ ಅದರಲ್ಲಿ ನಾಲ್ಕು ವರ್ಷಗಳ ತರಬೇತಿ ಪಡೆದು ಬರುವ ಯುವಕರಿಗೆ -ಅಗ್ನಿವೀರರು- ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವಸತಿ ಶಾಲೆಗಳ ದೈಹಿಕ ಶಿಕ್ಷಕರ ಹುದ್ದೆಗಳಲ್ಲಿ ಶೇ.೭೫ರಷ್ಟು ಮೀಸಲಾತಿ ನೀಡಲು ಯೋಜನೆಗಳನ್ನು ರೂಪಿ ಸಲು ಚಿಂತನೆ ನಡೆದಿದೆ ಎಂದು ರಾಜ್ಯ ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಅಗ್ನಿಪಥ್ ಯೋಜನೆಯ ಕುರಿತಂತೆ ದೇಶಾದ್ಯಂತ ಚರ್ಚೆಗಳು, ವಿವಾದ ನಡೆಯುತ್ತಿವೆ. ಅಗ್ನಿಪಥಕ್ಕೆ ಅಗ್ನಿ ಕೊಡುವವರು ಕೆಲವು ಕಡೆ ಗಲಾಟೆಯನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ಅಗ್ನಿವೀರರು ಸಹ ಸೃಷ್ಟಿಯಾಗುತಿದ್ದಾರೆ. ಅಗ್ನಿಪಥ್ ಯೋಜನೆಯಲ್ಲಿ ನಾಲ್ಕು ವರ್ಷಗಳ ಸೇನಾ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.
ತರಬೇತಿ ಪಡೆದು ಬರುವ ಯುವಜನತೆಗೆ ರಾಜ್ಯದಲ್ಲಿರುವ ಇಲಾಖೆಯ ಸುಮಾರು ೮೨೬ರಷ್ಟು ವಸತಿ ಶಾಲೆಗಳ ದೈಹಿಕ ಶಿಕ್ಷಕರು ಹಾಗೂ ವಾರ್ಡನ್ ಹುದ್ದೆಗಳಲ್ಲಿ ಶೇ.೭೫ರಷ್ಟು ಮೀಸಲಾತಿ ಇಡುವ ಬಗ್ಗೆ ಇಲಾಖೆಗೆ ಟಿಪ್ಪಣಿ ಕಳುಹಿಸಿದ್ದೇನೆ. ಈ ಬಗ್ಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಪರಿಶೀಲನೆ ನಡೆಸಲಿದೆ ಎಂದು ಕೋಟ ವಿವರಿಸಿದರು.
ಅದೇ ರೀತಿ ಇಲಾಖೆಯ ಇತರೆ ಹುದ್ದೆಗಳಲ್ಲೂ ಇವರಿಗೆ ಆದ್ಯತೆ ನೀಡುವ ಚಿಂತನೆ ನಡೆದಿದೆ. ಕಡತವನ್ನು ಮಂಡಿಸಲ ಅಧಿಕಾರಿಗಳಿಗೆ ಈಗಾಗಲೇ ಟಿಪ್ಪಣಿ ಕೊಡಲಾಗಿದೆ. ಇಲಾಖೆಯ ಮೂಲಕ ಈ ಯೋಜನೆಯನ್ನು ರೂಪಿಸಿ ಜಾರಿಗೊಳಿಸುತ್ತೇವೆ. ಇದು ಅಗ್ನಿಪಥ್ ಯೋಜನೆಗೆ ಪೂರಕವಾಗಿರುವ ಒಂದು ಯೋಜನೆಯಾಗಿದೆ ಎಂದು ಕೋಟ ತಿಳಿಸಿದರು.
ಕರಾವಳಿ 3 ಜಿಲ್ಲೆಗಳಲ್ಲಿ ಸೇನೆ ಸೇರ್ಪಡೆಗೆ ತರಬೇತಿ: ಕರಾವಳಿಯ ಮೂರು ಜಿಲ್ಲೆಗಳಲ್ಲಿ ದೇಶದ ಸೇನೆಯಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವವರಿಗಾಗಿ ಪೂರ್ವಭಾವಿ ತರಬೇತಿ ನೀಡುವ ಸಂಸ್ಥೆಗಳನ್ನು ತೆರೆಯಲು ನಿರ್ಧರಿಸಲಾ ಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ದಕ್ಷಿಣ ಕನ್ನಡದಲ್ಲಿ ವೀರರಾಣಿ ಅಬ್ಬಕ್ಕನ ಹೆಸರಿನಲ್ಲಿ, ಉಡುಪಿಯಲ್ಲಿ ವೀರ ಯೋಧರಾದ ಕೋಟಿ ಚೆನ್ನಯ್ಯರ ಹೆಸರಿನಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆ ಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹೇಂಜಾ ನಾಯ್ಕರ ಹೆಸರಿನಲ್ಲಿ ಸೇವಾ ಸೇರ್ಪಡೆಗೆ ತರಬೇತಿ ಸಂಸ್ಥೆಗಳು ಪ್ರಾರಂಭಗೊಳ್ಳಲಿವೆ. ಯೋಜನೆ ಈಗಾಗಲೇ ಅಂತಿಮಗೊಂಡಿದ್ದು, ಶೀಘ್ರವೇ ಪ್ರಾರಂಭಗೊಳ್ಳಲಿದೆ ಎಂದವರು ಹೇಳಿದರು.
ಸೇಂದಿ ನಿಷೇಧ-ಸಮುದಾಯದೊಂದಿಗೆ ಚರ್ಚೆ: ರಾಜ್ಯದಲ್ಲಿ ಸೇಂದಿ ನಿಷೇಧವನ್ನು ಹಿಂದೆಗೆದುಕೊಳ್ಳಬೇಕು ಹಾಗೂ ನಾರಾಯಣಗುರು ನಿಗಮವನ್ನು ಸ್ಥಾಪಿಸಬೇಕೆಂಬ ಬೇಡಿಕೆಯನ್ನಿಟ್ಟು ಉಪವಾಸ ಸತ್ಯಾಗ್ರಹ ಪ್ರಾರಂಭಿಸುವುದಾಗಿ ಪ್ರಕಟಿಸಿರುವ ಶ್ರೀಪ್ರಣವಾನಂದ ಸ್ವಾಮೀಜಿ ಅವರನ್ನು ಮನ ಒಲಿಸುವ ಕಾರ್ಯವನ್ನು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಪ್ರತಿಯೊಂದು ಸಮುದಾಯವೂ ಪ್ರತ್ಯೇಕ ನಿಗಮ ಸ್ಥಾಪನೆಗೆ ಒತ್ತಾಯಿಸಿದರೆ ಬೇಡಿಕೆ ಈಡೇರಿಸಲು ಕಷ್ಟ. ಆದ್ದರಿಂದ ಈಗಾಗಲೇ ಹಿಂದುಳಿದ ವರ್ಗಗಳ ೨ಎಯಲ್ಲಿ ಬರುವ ಜನಾಂಗಗಳಿಗೆ ಬಜೆಟ್‌ನಲ್ಲಿ ೪೦೦ ಕೋಟಿ ರೂ. ಅನುದಾನವನ್ನು ನೀಡಲಾಗಿದೆ. ಅದನ್ನು 500 ಕೋಟಿ ರೂ.ಗಳಿಗೆ ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಭರವಸೆ ನೀಡಿದ್ದಾರೆ ಎಂದರು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹೊರತು ಪಡಿಸಿ ೧೯೯೨ರಿಂದ ಅಂದರೆ ಕಳೆದ ೩೦ ವರ್ಷಗಳಿಂದ ಸೇಂದಿ ನಿಷೇಧವಿರುವ ಜಿಲ್ಲೆಗಳಲ್ಲಿ ಈ ನಿಷೇಧವನ್ನು ರದ್ದುಗೊಳಿಸಬೇಕೆ ಎಂಬ ಬಗ್ಗೆ ಸಮುದಾಯದೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಕೆಲವು ಕಡೆಗಳಲ್ಲಿ ಇದಕ್ಕೆ ವಿರೋಧವೂ ವ್ಯಕ್ತವಾಗಿದೆ ಎಂದರು.
ಈಗಾಗಲೇ ಸೇಂದಿ ನಿಷೇಧವಿರುವ ಜಿಲ್ಲೆಗಳಲ್ಲಿ ಈಡಿಗ, ಬಿಲ್ಲವ, ನಾಮಧಾರಿ ಸಮುದಾಯದವರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆಯನ್ನು ರೂಪಿಸಲಾಗಿದೆ ಎಂದರು.
ನಾರಾಯಣಗುರು ವಸತಿ ಶಾಲೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಲ್ಕು ಜಿಲ್ಲೆಗಳಲ್ಲಿ ನಾರಾಯಣಗುರು ವಸತಿಶಾಲೆಯನ್ನು ಸ್ಥಾಪಿಸಲು ನಿರ್ಧರಿಸಿದ್ದು, ಇದಕ್ಕಾಗಿ ತಲಾ ೨೫ ಕೋಟಿ ರೂ.ಗಳಂತೆ ಒಟ್ಟು ೧೦೦ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ನಾರಾಯಣಗುರು ವಸತಿ ಶಾಲೆಗಳು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಾರಂಭಗೊಳ್ಳಲಿವೆ ಎಂದು ಕೋಟ ಶ್ರೀನಿವಾಸ ಪೂಜಾರಿ ವಿವರಿಸಿದರು.