ಕೋವಿಡ್ ಸಾವು ಪ್ರಕರಣ; ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಕಾಲಮಿತಿ ವಿಸ್ತರಣೆ
ಮಂಗಳೂರು : ಕೋವಿಡ್-೧೯ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕಾನೂನುಬದ್ಧ ವಾರಸುದಾರರಿಗೆ ಕೇಂದ್ರ ಸರಕಾರದ ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳಂತೆ ತಲಾ ೫೦,೦೦೦ ರೂ.ಗಳ ಪರಿಹಾರ ಧನ ಪಡೆಯುವ ಸಲುವಾಗಿ ಅರ್ಜಿ ಸಲ್ಲಿಸುವ ಕಾಲಮಿತಿಯನ್ನು ವಿಸ್ತರಿಸಲಾಗಿದೆ.
ಕೋವಿಡ್-೧೯ನಿಂದ ಮೃತಪಟ್ಟಿದ್ದು, ಆರೋಗ್ಯ ಇಲಾಖೆಯ ದತ್ತಾಂಶದಲ್ಲಿ ಲಭ್ಯವಿಲ್ಲದ ಪ್ರಕರಣಗಳನ್ನು ಜಿಲ್ಲೆಯ ಅಪರ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ರಚಿಸಲಾದ ಕುಂದುಕೊರತೆ ನಿವಾರಣಾ ಸಮಿತಿಯಲ್ಲಿ ತೀರ್ಮಾನಿಸಿ ಸ್ಟೇಟ್‌ಕೋಡ್ ವಾರ್‌ರೂಂ ಲೈನ್‌ಲಿಸ್ಟ್‌ನಲ್ಲಿ ಸೇರ್ಪಡೆಗೊಳಿಸಿದ ಎಸ್‌ಡಿಆರ್‌ಎಫ್ ಮಾರ್ಗಸೂಚಿಯ ಅನ್ವಯ ಪರಿಹಾರ ಪಾವತಿಸಲು ಸರಕಾರ ಆದೇಶ ಹೊರಡಿಸಿದೆ.
೨೦೨೨ರ ಮಾರ್ಚ್ ೨೦ಕ್ಕಿಂತ ಮೊದಲು ಕೋವಿಡ್-೧೯ ವೈರಾಣು ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಪ್ರಕರಣಗಳಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ೨೦೨೨ರ ಜೂನ್ ೩೦ರೊಳಗೆ ಕಾಲಮಿತಿ ವಿಸ್ತರಿಸಲಾಗಿದೆ.
೨೦೨೨ರ ಮಾರ್ಚ್ ೨೦ರ ನಂತರ ಕೋವಿಡ್-೧೯ ವೈರಾಣು ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಪ್ರಕರಣ ಗಳಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಮರಣ ಸಂಭವಿಸಿದ ದಿನಾಂಕದಿಂದ ೯೦ ದಿನಗಳ ಕಾಲಮಿತಿಯನ್ನು ನಿಗದಿಗೊಳಿಸಲಾಗಿದೆ.
ಸ್ವೀಕೃತವಾದ ಅರ್ಜಿಗಳ ಸಂಸ್ಕರಣೆ ಮತ್ತು ಪರಿಹಾರ ಪಾವತಿಗೆ ಅರ್ಜಿ ಸ್ವೀಕರಿಸಿದ ದಿನಾಂಕದಿಂದ ೩೦ ದಿನಗಳ ಕಾಲಮಿತಿ ಅನ್ವಯವಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.







