ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗೆ ಸೀಮಿತವಲ್ಲ: ವೇದವ್ಯಾಸ ಕಾಮತ್

ಮಂಗಳೂರು : ಸ್ಮಾರ್ಟ್ ಸಿಟಿ ಯೋಜನೆ ಕೇವಲ ಕಾಮಗಾರಿಗಳಿಗೆ ಸೀಮಿತವಾಗಿಲ್ಲ. ಮುಂದಿನ ಏಳು ದಿನಗಳ ಕಾಲ ಸ್ಮಾರ್ಟ್ ಸಿಟಿ ವತಿಯಿಂದ ಹಲವು ಜನಪರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಸ್ಮಾರ್ಟ್ ಸಿಟಿ ಯೋಜನೆ ಆರಂಭಗೊಂಡು ಏಳು ವರ್ಷ ಪೂರ್ತಿಯಾದ ಹಿನ್ನಲೆಯಲ್ಲಿ ನಗರದ ಲೇಡಿಹಿಲ್‌ನಲ್ಲಿ ಹಮ್ಮಿಕೊಳ್ಳಲಾದ ಮನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟ ಬಳಿಕ ಅವರು ಮಾತನಾಡಿದರು.
ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಹತ್ತಾರು ಜನಪರ ಕಲ್ಪನೆಯನ್ನಿಟ್ಟುಕೊಂಡು ಜಿಲ್ಲೆಯ ಅಭಿವೃದ್ಧಿಗಾಗಿ ಜಾರಿಗೊಂಡಿರುವ ಸ್ಮಾರ್ಟ್ ಸಿಟಿಯೋಜನೆ ಆರಂಭಗೊಂಡು ಏಳು ವಷರ್ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಸಮಾಜಕ್ಕೆ ಮತ್ತು ಸಾರ್ವಜನಿಕರಿಗೆ ಅಗತ್ಯವಿರುವ ಮನಮಹೋತ್ಸವ, ಸ್ವಚ್ಚತಾ ಅಭಿಯಾನ ಮತ್ತು ಬೀದಿ ನಾಟಕಗಳನ್ನು ಜಿಲ್ಲೆಯಲ್ಲಿ ಏಳು ದಿನಗಳ ಆಯೋಜಿಸಲಾಗಿದೆ. ಎಂದರು.
ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ನಗರಗಳನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಮೋದಿಯವರ ಕನಸಿನ ಯೋಜನೆಯಾದ ಸ್ಮಾರ್ಟ್ ಸಿಟಿ ಯೋಜನೆ ಜಾರಿಯಾಗಿ ೭ ವರ್ಷ ಕಳೆದಿದೆ. ಆ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ವತಿಯಿಂದ ಜೂ.೨೫ರವರೆಗೆ ಜನಪರ ಕಾರ್ಯಕ್ರಮ ಗಳೊಂದಿಗೆ ಏಳು ತಂಡಗಳ, ಏಳು ಓವರ್‌ಗಳ ಪಂದ್ಯಾಟವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಉಪ ಮೇಯರ್ ಸುಮಂಗಲಾ ರಾವ್, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಸ್ಮಾರ್ಟ್ ಸಿಟಿ ನಿರ್ದೇಶಕ ಸುಧೀರ್ ಶೆಟ್ಟಿ, ಸ್ಮಾರ್ಟ್ ಸಿಟಿ ಅಧಿಕಾರಿ ಗಳಾದ ಲಿಂಗೇಗೌಡ, ಅರುಣ್ ಪ್ರಭಾ, ಚಂದ್ರಕಾಂತ್, ಕಾರ್ಪೊರೇಟರ್ ಗಣೇಶ್ ಕುಲಾಲ್ ಉಪಸ್ಥಿತರಿದ್ದರು.







