24/7 ನೀರು ಸರಬರಾಜು ಯೋಜನೆ; ಜುಲೈ ಅಂತ್ಯದೊಳಗೆ ಪ್ರಾಯೋಗಿಕ ಹಂತ ಪೂರ್ಣಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಸೂಚನೆ

ಮಂಗಳೂರು : ಕರ್ನಾಟಕ ನಗರ ಮೂಲಸೌಕರ್ಯ ಮತ್ತು ಹಣಕಾಸು ನಿಗಮದ ವತಿಯಿಂದ ನಗರಕ್ಕೆ ೨೪/೭ ನೀರು ಸರಬರಾಜು ಯೋಜನೆಯ ಅನುಷ್ಠಾನದ ಪ್ರಾಯೋಗಿಕ ಹಂತವನ್ನು ಜುಲೈ ಅಂತ್ಯದೊಳಗೆ ಪೂರ್ಣಗೊ ಳಿಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಸೂಚಿಸಿದರು.
ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರಕ್ಕೆ ದಿನದ ೨೪ ತಾಸು ನೀರು ಪೂರೈಸುವ ಯೋಜನೆಯ ೫೪ ಹಂತಗಳಲ್ಲಿ ಕೈಗೊಂಡಿರುವ ಕಾಮಗಾರಿಗಳು ವೇಗ ನೀಡಬೇಕು. ನಗರದ ಜನತೆಗೆ ಶೀಘ್ರವಾಗಿ ೨೪/೭ ಕುಡಿಯುವ ನೀರಿನ ಯೋಜನೆ ಲಭಿಸಬೇಕು. ಈ ನಿಟ್ಟಿನಲ್ಲಿ ಪ್ರಾಯೋಗಿಕ ಯೋಜನೆಯು ಜುಲೈ ಅಂತ್ಯದೊಳಗೆ ಪೂರ್ಣಗೊಳ್ಳಬೇಕು ಎಂದು ಸುನೀಲ್ ಕುಮಾರ್ ತಾಕೀತು ಮಾಡಿದರು.
ರೆನ್ ೧೮ಸಿ ಬೆಂದ್ರು ಹಾಗೂ ರೆನ್ ೨೦ಎ ಪಡೀಲ್‌ನಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಹೆಚ್ಚು ಕಾರ್ಮಿಕರನ್ನು ಬಳಸಿಕೊಂಡು ಬಾಕಿ ಉಳಿದ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಸಚಿವ ಸುನಿಲ್ ಕುಮಾರ್ ತಿಳಿಸಿದರು.
ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಸುಮಂಗಳಾ ರಾವ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಪೊನ್ನುರಾಜ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಜಿಪಂ ಸಿಇಒ ಡಾ. ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಸ್ಮಾರ್ಟ್ ಸಿಟಿ ಎಂಡಿ ಪ್ರಶಾಂತ್ ಮಿಶ್ರಾ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಕರ್ನಾಟಕ ನಗರ ಮೂಲಸೌಕರ್ಯ ಮತ್ತು ಹಣಕಾಸು ನಿಗಮದ ಮುಖ್ಯ ಇಂಜಿನಿಯರ್ ಕ್ಯಾ.ದೊಡ್ಡಿಹಾಳ್, ಸ್ಮಾರ್ಟ್ ಸಿಟಿ ಮುಖ್ಯ ಇಂಜಿನಿಯರ್ ಶ್ರೀನಿವಾಸನ್, ಕರ್ನಾಟಕ ನಗರ ಮೂಲಸೌಕರ್ಯ ಮತ್ತು ಹಣಕಾಸು ನಿಗಮದ ಜೆಎಂಡಿ ಶಿಲ್ಪಾ, ಗೇಲ್ ಇಂಡಿಯಾದ ಜನರಲ್ ಮ್ಯಾನೇಜರ್ ಯು.ಸಿ.ಸಿಂಗ್, ಡಿಜಿಎಂ ಪಿ.ಜಿ.ಜಾಯ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.







