ವಿದೇಶಿ ಶಕ್ತಿಯಿಂದ ಪ್ರತಿಭಟನೆಗೆ ಹಣಕಾಸು ನೆರವು: ‘ಅಗ್ನಿಪಥ್’ ವಿರೋಧಿ ಪ್ರತಿಭಟನೆ ಕುರಿತು ಆರ್ಎಸ್ಎಸ್

Photo: Twitter/@OmKhokhani17
ಹೊಸದಿಲ್ಲಿ, ಜೂ. ೨೨: ಮೋದಿ ಸರಕಾರದ ‘ಅಗ್ನಿಪಥ್’ಯೋಜನೆ ಭವಿಷ್ಯಕ್ಕೆ ಯುವ ಸೇನೆಯನ್ನು ನಿರ್ಮಾಣ ಮಾಡುವಲ್ಲಿ ನಿರ್ಣಾಯಕವಾಗಿದೆ. ಇದರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಯೋಜಿತವಾಗಿದೆ ಹಾಗೂ ಇದಕ್ಕೆ ವಿದೇಶಿ ಶಕ್ತಿಗಳು ಹಣಕಾಸು ನೆರವು ನೀಡಿವೆ ಎಂದು ಆರ್ಎಸ್ಎಸ್ ಹೇಳಿದೆ.
‘‘ಅಗ್ನಿಪಥ್ ಬಹು ನಿರೀಕ್ಷಿತ ಯೋಜನೆಯಾಗಿರುವುದರಿಂದ ಎಂದಿಗೂ ಹಿಂಪಡೆಯಬಾರದು’’ ಎಂದು ಆರ್ಎಸ್ಎಸ್ ಕೇಂದ್ರ ಸಮಿತಿಯ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ. ‘‘ಇದರ ವಿರುದ್ಧ ಈಗ ನಡೆಯುತ್ತಿರುವ ಪ್ರತಿಭಟನೆ ಯೋಜಿತ. ಭಾರತವನ್ನು ದುರ್ಬಲಗೊಳಿಸಲು ವಿದೇಶದಿಂದ ಹಣಕಾಸು ನೆರವು ಪಡೆದು ಪ್ರತಿಭಟನೆ ನಡೆಸಲಾಗುತ್ತಿದೆೆ’’ ಎಂದು ಅವರು ತಿಳಿಸಿದ್ದಾರೆ.
ಭವಿಷ್ಯದ ಸವಾಲು ಎದುರಿಸಲು ಯುವ ಸೇನೆಯ ಅಗತ್ಯತೆ ಇದೆ. ಭಾರತೀಯ ಸೇನೆಯ ಸುಧಾರಣೆಗೆ ಈ ಯೋಜನೆಯ ಅಗತ್ಯತೆ ಇದೆ. ನಾವು ನಮ್ಮಲ್ಲಿರುವ ಯುಪ ಪಡೆಯನ್ನು ಉತ್ತಮವಾಗಿ ಬಳಸಿಕೊಳ್ಳಬೇಕು ಎಂದು ಆರ್ಎಸ್ಎಸ್ನ ಇನ್ನೋರ್ವ ಪದಾಧಿಕಾರಿ ತಿಳಿಸಿದ್ದಾರೆ.
ಆದರೆ, ‘ಅಗ್ನಿಪಥ್’ ವಿವಾದದ ಕುರಿತಂತೆ ಆರ್ಎಸ್ಎಸ್ ಯಾವುದೇ ಹೇಳಿಕೆ ನೀಡಿಲ್ಲ. ಈ ಬಗ್ಗೆ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿರುವ ಆರ್ಎಸ್ಎಸ್ನ ಅಖಿಲ ಭಾರತೀಯ ಪ್ರಚಾರ್ ಪ್ರಮುಖ್ ಸುನೀಲ್ ಅಂಬೇಕರ್, ‘‘ದೇಶದ ವಿಚಾರದಲ್ಲಿ ರಾಷ್ಟ್ರೀಯ ಭದ್ರತೆ ಅತಿ ಮುಖ್ಯವಾಗಿದೆ. ಭದ್ರತೆಯ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಗಮನಿಸಬೇಕು’’ ಎಂದಿದ್ದಾರೆ.







