ನಟ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ʼವಿಕ್ರಾಂತ್ ರೋಣʼ ಟ್ರೇಲರ್ ಬಿಡುಗಡೆ: ವ್ಯಾಪಕ ಮೆಚ್ಚುಗೆ
ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ʼವಿಕ್ರಾಂತ್ ರೋಣʼ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ತೆರೆಗೆ ಬರಲಿರುವ ಈ ಚಿತ್ರಕ್ಕೆ ಸಾಕಷ್ಟು ಕುತೂಹಲ ಮೂಡಿದೆ. ಈಗಾಗಲೇ ಆರು ಭಾಷೆಯಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಮಳೆಯಾಲಂ ಬಿಟ್ಟು ಉಳಿದೆಲ್ಲಾ ಭಾಷೆಗಳಲ್ಲಿ ಸ್ವತಃ ಸುದೀಪ್ ಅವರೇ ಡಬ್ಬಿಂಗ್ ಮಾಡಿದ್ದಾರೆ.
ವಿವಿಧ ಭಾಷೆಯ ಸಿನೆಮಾ ಇಂಡಸ್ಟ್ರಿಯ ಪ್ರಮುಖ ತಾರೆಗಳಿಂದ ಆಯಾ ಭಾಷೆಯ ಟ್ರೇಲರ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಹಿಂದಿಯ ಟ್ರೇಲರ್ ಅನ್ನು ಸಲ್ಮಾನ್ ಖಾನ್ ಬಿಡುಗಡೆಗೊಳಿಸಿದರೆ, ಮಳೆಯಾಲಂ ಚಿತ್ರರಂಗದ ಬಹುಬೇಡಿಕೆಯ ನಟ ದುಲ್ಕರ್ ಸಲ್ಮಾನ್ ಕೇರಳದಲ್ಲಿ ಟ್ರೇಲರ್ ಅನಾವರಣಗೊಳಿಸಿದ್ದಾರೆ. ಹಾಲಿವುಡ್ ಚಿತ್ರಗಳಲ್ಲೂ ಬ್ಯುಸಿಯಾಗಿರುವ ಧನುಷ್ ತಮಿಳು ಟ್ರೇಲರ್ ಬಿಡುಗಡೆಗೊಳಿಸಿದರೆ, ತೆಲುಗಿನಲ್ಲಿ ಆರ್ ಆರ್ ಆರ್ ಖ್ಯಾತಿಯ ರಾಮ್ ಚರಣ್ ಟ್ರೇಲರ್ ಅನ್ನು ಅನಾವರಣ ಮಾಡಿದ್ದಾರೆ.
ಜುಲೈ 28 ರಂದು ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಪ್ಯಾನ್ ಇಂಡಿಯಾ ಪರಿಕಲ್ಪನೆಯನ್ನು ದಾಟಿ ಪ್ಯಾನ್ ವರ್ಲ್ಡ್ ಚಿತ್ರ ಎನಿಸಿಕೊಳ್ಳಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಕನ್ನಡ ಭಾಷೆಯ ಟ್ರೇಲರ್ ಬಿಡುಗಡೆಯಾದ 2 ಗಂಟೆಯಲ್ಲಿಯೇ 10 ಲಕ್ಷಕ್ಕೂ ಅಧಿಕ ವೀಕ್ಷಣೆ ದೊರೆತಿದೆ. ಗುರುವಾರ ಸಂಜೆ 5 ಗಂಟೆಯ ವೇಳೆಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಟ್ರೇಲರ್ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಸುದೀಪ್ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ವಿಪರೀತ ನಿರೀಕ್ಷೆ ಹುಟ್ಟಿಕೊಂಡಿದೆ.
ಚಿತ್ರವನ್ನು ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ರಚಿಸಿ, ನಿರ್ದೇಶಿಸಿದ್ದು ನಿರೂಪ್ ಭಂಡಾರಿ ಇನ್ನೊಂದು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಶಾಲಿನಿ ಜ್ಯಾಕ್ ಮಂಜು, ಅಲಂಕಾರ್ ಪಾಂಡ್ಯನ್ ಬಂಡವಾಳ ಹೂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕೆ ಇದೆ.
ಚಿತ್ರದ ಟ್ರೇಲರ್ ಬಿಡುಗಡೆಗೂ ಮುನ್ನ ಸ್ಯಾಂಡಲ್ವುಡ್ ತಾರೆಯರಿಗೆ ಹಾಗೂ ಮಾಧ್ಯಮದವರಿಗೆ ಕಾರ್ಯಕ್ರಮವೊಂದನ್ನು ನಗರದ ಓರಾಯನ್ ಮಾಲ್ನಲ್ಲಿ ಚಿತ್ರತಂಡ ಆಯೋಜಿಸಿತ್ತು. ರವಿಚಂದ್ರನ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್, ರಕ್ಷಿತ್ ಶೆಟ್ಟಿ, ಸೃಜನ್ ಲೋಕೇಶ್, ರಿಷಬ್ ಶೆಟ್ಟಿ, ಧನಂಜಯ, ರಾಜ್ ಬಿ ಶೆಟ್ಟಿ ಮೊದಲಾದ ತಾರೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಚಿತ್ರತಂಡಕ್ಕೆ ಹಾರೈಸಿದ್ದರು.