ಬೈಂದೂರು: 4 ಲಕ್ಷ ರೂ. ಮೌಲ್ಯದ ಅನ್ನಭಾಗ್ಯ ಅಕ್ಕಿ ವಶ
ಕುಂದಾಪುರ : ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಲಾರಿಯನ್ನು ಕುಂದಾಪುರ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ್ ಕೆ. ಮತ್ತವರ ತಂಡ ವಶಕ್ಕೆ ಪಡೆದ ಘಟನೆ ಬೈಂದೂರು ಸಮೀಪದ ಯಡ್ತರೆ ಬಳಿ ಜೂ.22ರಂದು ನಡೆದಿದೆ.
ಬುಧವಾರ ಡಿವೈಎಸ್ಪಿ ಶ್ರೀಕಾಂತ್ ಕೆ. ಅವರು ಗಸ್ತಿನಲ್ಲಿರುವಾಗ ಶಿರೂರು ಕಡೆಯಿಂದ ಒಂದು ಟಾಟಾ ಕಂಪೆನಿಯ ಲಾರಿಯಲ್ಲಿ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಸಾಗಾಟ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ಯಡ್ತರೆ ಗ್ರಾಮದ ಹೊಸ ಬಸ್ ನಿಲ್ದಾಣದ ಬಳಿ ತೆರಳಿ ಸಿಬ್ಬಂದಿಗಳೊಂದಿಗೆ ಹಾಗೂ ಬೈಂದೂರು ಆಹಾರ ನಿರೀಕ್ಷಕರು, ಗ್ರಾಮ ಲೆಕ್ಕಿಗರೊಂದಿಗೆ ಕಾದುಕೊಂಡಿರುವಾಗ ಶಿರೂರು ಕಡೆಯಿಂದ ಒಂದು ಟಾಟಾ ಕಂಪೆನಿಯ ಲಾರಿ ಬರುವುದನ್ನು ನೋಡಿ ಸಿಬ್ಬಂದಿಗಳ ಸಹಾಯದಿಂದ ಲಾರಿಯನ್ನು ನಿಲ್ಲಿಸಿದ್ದಾರೆ.
ಈ ವೇಳೆ ಲಾರಿಯಲ್ಲಿದ್ದ ಚಾಲಕ ಬೆಂಗಳೂರು ದಕ್ಷಿಣ ಹೊನ್ನಗಟ್ಟಿ ನಿವಾಸಿ ಸುನೀಲ್ ಹೆಚ್.ಆರ್ (22) ಮತ್ತು ಇನ್ನೋರ್ವ ವ್ಯಕ್ತಿ ಭಟ್ಕಳ ನಿವಾಸಿ ಮಹಮ್ಮದ್ ಸಮೀರ (25) ಅವರನ್ನು ಲಾರಿಯಲ್ಲಿರುವ ಲೋಡಿನ ಬಗ್ಗೆ ವಿಚಾರಿಸಿದಾಗ ಅಕ್ಕಿಯ ಚೀಲಗಳು ಎಂಬುದಾಗಿ ತಿಳಿಸಿದ್ದಾರೆ. ಲಾರಿಯೊಳಗಿರುವ ಅಕ್ಕಿ ಚೀಲಗಳ ಬಗ್ಗೆ ಕೂಲಂಕಷವಾಗಿ ವಿಚಾರಿಸಿದಾಗ, ಸರಕಾರದಿಂದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿ ಎಂಬುದಾಗಿ ತಿಳಿಸಿದ್ದಾಗಿ ದೂರಿನಲ್ಲಿ ವಿವರಿಸಲಾಗಿದೆ.
ಲಾರಿಯಲ್ಲಿ ೩೨೦ ಬಿಳಿ ಪಾಲಿಥೀನ್ ಚೀಲಗಳಿದ್ದು ಪರಿಶೀಲಿಸಿದಾಗ ಪ್ರತಿ ಚೀಲವು ೫೦ ಕೆಜಿಯದಾಗಿದ್ದು, ಒಟ್ಟು ೧೬ ಟನ್‌ನಷ್ಟು ಅಕ್ಕಿ ಇತ್ತು. ಈ ಪಡಿತರ ಅಕ್ಕಿ ಮೌಲ್ಯ ೪ ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಪೊಲೀಸರು ಲಾರಿ ಹಾಗೂ ಚಾಲಕನ ಸಿಟಿನ ಬದಿಯಲ್ಲಿ ೩ ಗೋಣಿ ಚೀಲಗಳು ಹಾಗೂ ಚೀಲವನ್ನು ಹೊಲಿಯುವ ಯಂತ್ರ, ೩೨೦ ಅಕ್ಕಿ ತುಂಬಿದ ಚೀಲಗಳು, ೩ ಗೋಣಿ ಚೀಲಗಳು ಹಾಗೂ ಚೀಲ ಹೊಲಿಯುವ ಯಂತ್ರವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರಿಮಂಜೇಶ್ವರದಲ್ಲಿ ೪೨೦ ಕೆ.ಜಿ.ವಶ
ಬೈಂದೂರು ತಹಶೀಲ್ದಾರ್‌ರ ಸೂಚನೆ ಯಂತೆ ಆಹಾರ ನಿರೀಕ್ಷಕರಾದ ವಿನಯಕುಮಾರ್ ಅವರು ಕಿರಿಮಂಜೇಶ್ವರ ಗ್ರಾಮ ಲೆಕ್ಕಿಗ ಗಣೇಶ ಮೇಸ್ತರೊಂದಿಗೆ ಬುಧವಾರ ಸಂಜೆ ೫:೦೦ ಗಂಟೆಗೆ ಕಿರಿಮಂಜೇಶ್ವರ ಕಾರಂತರ ಹೊಟೇಲ್ ಸಮೀಪ ದಾಳಿ ನಡೆಸಿದಾಗ ಟಾಟಾ ಏಸ್ ಗೂಡ್ಸ್ ವಾಹನದ ಹಿಂಬದಿ ೧೪ ಪಾಲಿಥಿನ್ ಚೀಲಗಳಲ್ಲಿ ೯೨೪೦ ರೂ. ಮೌಲ್ಯದ ೪.೨೦ ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿಯನ್ನು ಯಾವುದೇ ದಾಖಲೆಗಳಿಲ್ಲದೇ ಅಕ್ರಮವಾಗಿ ಸಾಗಿಸುತ್ತಿರುವುದು ಪತ್ತೆಯಾಯಿತು. ವಾಹನ ಹಾಗೂ ಅಕ್ಕಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆರೋಪಿ ಚಾಲಕ ವಾಹನ ಬಿಟ್ಟು ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.