ಕರ್ನಾಟಕ ಕರಾವಳಿ ತೀರ ಸಮುದ್ರದಲ್ಲಿ ಭಾರೀ ಅಲೆಯ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ
ಮೀನುಗಾರರಿಗೆ ಎಚ್ಚರಿಕೆ

ಫೈಲ್ ಫೋಟೊ
ಉಡುಪಿ : ಜಿಲ್ಲೆಯಲ್ಲಿ ಮಾನ್ಸೂನ್ ಬಿರುಸುಗೊಳ್ಳುತ್ತಿರುವಂತೆ ಇಂದಿನಿಂದ ಮುಂದಿನ ನಾಲ್ಕು ದಿನಗಳ ಕಾಲ ಕರ್ನಾಟಕ ಕರಾವಳಿ ತೀರದುದ್ದಕ್ಕೂ ಗಂಟೆಗೆ ೪೦ರಿಂದ ೫೦ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇದ್ದು, ಪಶ್ಚಿಮದ ಅರಬಿಸಮುದ್ರದಲ್ಲಿ ಮೂರರಿಂದ ೩.೨ಮೀ. ಎತ್ತರದ ಅಲೆಗಳು ದಡವನ್ನು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹೀಗಾಗಿ ಮಂಗಳೂರಿನಿಂದ ಕಾರವಾರದವರೆಗಿನ ಕರಾವಳಿ ತೀರದ ಮೀನುಗಾರರು ಜೂ.೨೫ರ ಮಧ್ಯರಾತ್ರಿಯವರೆಗೆ ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನು ನೀಡಲಾಗಿದೆ. ಇದರೊಂದಿಗೆ ಮುಂದಿನ ಐದು ದಿನಗಳ ಕಾಲ ಜಿಲೆಯಾದ್ಯಂತ ಆರೆಂಜ್ ಅಲರ್ಟ್ ಘೋಷಿಸಿದ್ದು, ೧೧೫.೬ಮಿ.ಮೀ.ನಿಂದ ೨೦೪.೪ಮಿ.ಮೀ.ವರೆಗೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.
ಆತ್ರಾಡಿಯಲ್ಲಿ ಮನೆಗೆ ಹಾನಿ: ಜಿಲ್ಲೆಯಲ್ಲಿ ಇಂದು ಮಳೆ ಮತ್ತೆ ಬಿರುಸು ಪಡೆದಿದ್ದು, ದಿನವಿಡೀ ಉತ್ತಮ ಮಳೆ ಸುರಿದಿದೆ. ನಿನ್ನೆ ಸ್ವಲ್ಪ ಬಿಡುವು ಪಡೆದಿದ್ದ ಮಳೆ ಇಂದು ಮತ್ತೆ ಬಿಟ್ಟು ಬಿಟ್ಟು ಜೋರಾಗಿಯೇ ಸುರಿಯುತ್ತಿದೆ. ಸಂಜೆಯ ಬಳಿಕ ಧಾರಾಕಾರ ಮಳೆ ಸುರಿಯುತ್ತಿದೆ.
ಗಾಳಿ-ಮಳೆಯಿಂದಾಗಿ ಜಿಲ್ಲೆಯ ಅನೇಕ ಕಡೆಗಳಲ್ಲಿ ವಾಸದ ಮನೆಗಳಿಗೆ ಹಾನಿಯಾದ ಬಗ್ಗೆ ವರದಿಗಳು ಬಂದಿದೆ. ಉಡುಪಿ ತಾಲೂಕಿನ ಆತ್ರಾಡಿ ಗ್ರಾಮದ ಚೈತ್ರಾ ಎಸ್.ರಾವ್ ಎಂಬವರ ಮನೆ ಸಂಪೂರ್ಣ ಹಾನಿಗೊಂಡಿದ್ದು, ಎರಡೂವರೆ ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿರುವ ಬಗ್ಗೆ ಅಂದಾಜಿಸಲಾಗಿದೆ.
ಉಳಿದಂತೆ ಮೂಡನಿಡಂಬೂರು ಗ್ರಾಮದ ನಿತ್ಯಾನಂದ ಎಂಬವರ ಮನೆ ಮೇಲೆ ಮರಬಿದ್ದು ಭಾಗಶ: ಹಾನಿಯಾ ಗಿದ್ದು 50 ಸಾವಿರ ರೂ. ನಷ್ಟವಾಗಿದೆ. ಹಿರೇಬೆಟ್ಟು ಗ್ರಾಮದ ಲೀಲಾಶೆಟ್ಟಿ ಇವರ ಮನೆ ಗಾಳಿ-ಮಳೆಯಿಂದ ಬಿರುಕುಗೊಂಡು ಭಾಗಶ: ಹಾನಿಯಾಗಿದೆ. 40 ಸಾವಿರ ರೂ. ನಷ್ಟದ ಅಂದಾಜು ಮಾಡಲಾಗಿದೆ.
ಉಡುಪಿ ತಾಲೂಕು 80 ಬಡಗುಬೆಟ್ಟು ಗ್ರಾಮದ ಅನಂತ ನಾಯಕ್ ಇವರ ಮನೆ ಗಾಳಿ-ಮಳೆಯಿಂದ ಹಾನಿಗೊಂಡಿದ್ದು 35 ಸಾವಿರ ರೂ. ಹಾಗೂ ಬ್ರಹ್ಮಾವರ ತಾಲೂಕು ಕುಮ್ರಗೋಡು ಗ್ರಾಮದ ರಾಧ ಮರಕಾಲ್ತಿ ಎಂಬವರ ವಾಸ್ತವ್ಯದ ಪಕ್ಕಾ ಮನೆ ಬಿರುಗಾಳಿಯಿಂದ ಭಾಗಶ: ಹಾನಿಗೊಂಡಿದ್ದು 16 ಸಾವಿರ ರೂ. ನಷ್ಟದ ಅಂದಾಜು ಮಾಡಲಾಗಿದೆ.