ಮನೆಗೆ ನುಗ್ಗಿ 8.75 ಲಕ್ಷ ರೂ. ಮೌಲ್ಯದ ನಗ-ನಗದು ಕಳವು
ಅಜೆಕಾರು, ಜೂ.೨೫: ಶಿರ್ಲಾಲು ಗ್ರಾಮದ ಹಾಡಿಯಂಗಡಿ ಸೂರ್ಯಂತೊಕ್ಲು ಶಾಲೆ ಬಳಿಯ ಮನೆಗೆ ಜೂ.೨೪ರಂದು ರಾತ್ರಿ ವೇಳೆ ನುಗ್ಗಿದ ದುಷ್ಕರ್ಮಿಗಳು ೮.೭೫ಲಕ್ಷ ರೂ. ಮೌಲ್ಯದ ನಗನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಚೆನ್ನಪ್ಪಎಂಬವರು ಪತ್ನಿ ಜೊತೆ ಸಂಜೆ ಮನೆಗೆ ಬೀಗ ಹಾಕಿ ಮಾಳದಲ್ಲಿರುವ ಪತ್ನಿ ಮನೆಗೆ ಹೋಗಿದ್ದು ಮರುದಿನ ಜೂ.೨೫ರಂದು ಬೆಳಗ್ಗೆ ೭ಗಂಟೆಗೆ ಮನೆಗೆ ವಾಪಾಸ್ಸು ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಮನೆ ಎದುರಿನ ಬಾಗಿಲಿನ ಚಿಲಕದ ಕೊಂಡಿಯನ್ನು ಮುರಿದು ನುಗ್ಗಿದ ಕಳ್ಳರು, ಕೋಣೆಯಲ್ಲಿದ್ದ ಕವಾಟಿನ ಬಾಗಿಲು ಮುರಿದು ೬ ಪವನ್ ತೂಕದ ಕರಿಮಣಿ ಸರ, ೫ ಪವನ್ ತೂಕದ ಹವಳದ ಚೈನ್, ೨ ಪವನ್ ತೂಕದ ೨ ಜೊತೆ ಉಂಗುರ, ೪ ಪವನ್ ತೂಕದ ಬ್ರಾಸ್ ಲೆಟ್, ೪ ಪವನ್ ತೂಕದ ಚೈನ್, ಒಂದು ಪವನ್ ತೂಕದ ಒಂದು ಜೊತೆ ಉಂಗುರ, ೨ ಪವನ್ ತೂಕದ ಎರಡು ಜೊತೆ ಕಿವಿಯೋಲೆ ಹಾಗೂ ಸೂಟ್ ಕೇಸಿನ ಒಳಗೆ ಇಟ್ಟಿದ್ದ ೧ ಪವನ್ ತೂಕದ ಒಂದು ಜೊತೆ ಜಂಟ್ಸ್ ಉಂಗುರ ಮತ್ತು ೭೫,೦೦೦ರೂ. ನಗದು ಕಳವು ಮಾಡಿದ್ದಾರೆ.
ಕಳವಾಗಿರುವ ಸುಮಾರು ೨೦೦ ಗ್ರಾಂ ಚಿನ್ನದ ಮೌಲ್ಯ ೮,೦೦,೦೦೦ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.