ಮೂಳೂರು ಚರ್ಚ್ ಹಣ ದುರುಪಯೋಗ ಆರೋಪ: ಧರ್ಮಗುರು ವಿರುದ್ಧ ಪ್ರಕರಣ ದಾಖಲು
ಕಾಪು: ಮೂಳೂರಿನಲ್ಲಿರುವ ಸಿಎಸ್‌ಐ ಬೇತಲ್ ಚರ್ಚ್‌ನ ಧರ್ಮಗುರು ಅಬ್ರಾಹಂ ಸುನೀಲ್ ಕೋಟ್ಯಾನ್ ಲಕ್ಷಾಂತರ ರೂ. ದುರುಪಯೋಗಪಡಿಸಿ, ದೇವಾಲಯ ನಿಯಮಗಳಿಗೆ ಹಾನಿಯುಂಟು ಮಾಡಿದ್ದಾರೆ ಎಂದು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2021ರ ಎ.1ರಿಂದ ಧರ್ಮಗುರುಗಳಾಗಿ ನೇಮಕಗೊಂಡ ಅಬ್ರಾಹಂ ಸುನೀಲ್ ಕೋಟ್ಯಾನ್ ಚರ್ಚ್‌ಗೆ ಬರುವಂತಹ ವಂತಿಕೆಗಳು, ಭಕ್ತರು ಕೊಡುವಂತಹ ಕಾಣಿಕ ಹಣ, ಸಭಾ ವಂತಿಕೆ, ಮಾವಿನ ಮರದ ಫಸಲಿನ ಹಣದ ಲೆಕ್ಕಗಳನ್ನು ತಿಂಗಳಿಗೊಮ್ಮೆ ಕಮಿಟಿಯವರಿಗೆ ಕೊಡದೆ, ಅವ್ಯವಹಾರ ನಡೆಸಿರುವುದಾಗಿ ದೂರಲಾಗಿದೆ.
ಇವರು ಚರ್ಚಿನಲ್ಲಿರುವ ದೇವರ ಕಾಣಿಕೆ ಪುಸ್ತಕದಲ್ಲಿ ನಮೂದಾದ ಹಣವನ್ನು ಬ್ಯಾಂಕಿಗೆ ಹಾಕಿರುವುದಿಲ್ಲ. ದೇವರ ಕಾಣಿಕೆ ಪುಸ್ತಕಕ್ಕೂ ಹಾಗೂ ಬ್ಯಾಂಕ್ ಪಾಸ್ ಪುಸ್ತಕಕ್ಕೂ ತಾಳೆ ಇರುವುದಿಲ್ಲ. ಅಲ್ಲದೇ ತನ್ನ ಸ್ವಂತ ಹೆಸರಿನಲ್ಲಿ ಚರ್ಚ್ ಬ್ಯಾಂಕ್ ಖಾತೆಯಿಂದ ಹಣವನ್ನು ಪಡೆದಿದ್ದಾರೆ. ಚರ್ಚಿನ ಆದಾಯದ ಪುಸ್ತಕಕ್ಕೆ ಯಾವುದೇ ಸಂಬಂಧವಿಲ್ಲದ ಸುಳ್ಳು ಲೆಕ್ಕ ಪತ್ರವನ್ನು ಸಭೆಯ ನೋಟೀಸ್ ಬೋರ್ಡ್‌ನಲ್ಲಿ ಪ್ರಕಟಿಸಿದ್ದಾರೆಂದು ಆಡಳಿತ ಮಂಡಳಿಯ ಹರ್ಷ ಕೋಟ್ಯಾನ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.