ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಬಂಧನ: ವಿಶ್ವಸಂಸ್ಥೆಯ ಅಧಿಕಾರಿ ಕಳವಳ

Photo: PTI
ಹೊಸದಿಲ್ಲಿ: ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರನ್ನು ಗುಜರಾತ್ ಪೊಲೀಸರು ಬಂಧಿಸಿರುವ ಬಗ್ಗೆ ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಶನಿವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಗುಜರಾತ್ ಪೊಲೀಸ್ ಇಲಾಖೆಯ ಭಯೋತ್ಪಾದನಾ ನಿಗ್ರಹ ದಳವು ಶನಿವಾರ ಮುಂಬೈನಲ್ಲಿ ಸೆಟಲ್ವಾಡ್ ಅವರನ್ನು ಬಂಧಿಸಿ ತಡರಾತ್ರಿ ಅಹಮದಾಬಾದ್ಗೆ ಕರೆದೊಯ್ದಿದೆ ಎಂದು ಎಎನ್ಐ ವರದಿ ಮಾಡಿದೆ.
2002ರ ಗುಜರಾತ್ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಸೆಟಲ್ವಾಡ್ , ಗುಜರಾತ್ನ ಮಾಜಿ ಪೊಲೀಸ್ ಮಹಾನಿರ್ದೇಶಕ ಆರ್.ಬಿ. ಶ್ರೀಕುಮಾರ್ ಹಾಗೂ ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಸಂಜೀವ್ ಭಟ್ ವಿರುದ್ಧ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿದ್ದಾರೆ.
ತೀಸ್ತಾ ಅವರು ದ್ವೇಷ ಹಾಗೂ ತಾರತಮ್ಯದ ವಿರುದ್ಧ ಪ್ರಬಲ ಧ್ವನಿಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಕ್ಷಕರ ವಿಶೇಷ ವರದಿಗಾರ್ತಿ ಮೇರಿ ಲಾಲರ್ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
“ಮಾನವ ಹಕ್ಕುಗಳನ್ನು ರಕ್ಷಿಸುವುದು ಅಪರಾಧವಲ್ಲ. ನಾನು ಅವರನ್ನು ಬಿಡುಗಡೆ ಮಾಡಲು ಹಾಗೂ ಭಾರತದಿಂದ ಕಿರುಕುಳವನ್ನು ಕೊನೆಗೊಳಿಸಲು ಕರೆ ನೀಡುತ್ತೇನೆ’’ ಎಂದು ಮೇರಿ ಲಾಲರ್ ಟ್ವೀಟಿಸಿದ್ದಾರೆ.
Deeply concerned by reports of #WHRD Teesta Setalvad being detained by Anti Terrorism Sqaud of Gujarat police. Teesta is a strong voice against hatred and discrimination. Defending human rights is not a crime. I call for her release and an end to persecution by #Indian state.
— Mary Lawlor UN Special Rapporteur HRDs (@MaryLawlorhrds) June 25, 2022