ಉಪ ಚುನಾವಣೆ: ಸಮಾಜವಾದಿ ಪಕ್ಷದ ಭದ್ರಕೋಟೆ ರಾಂಪುರ ವಶಪಡಿಸಿಕೊಂಡ ಬಿಜೆಪಿ
ಲಕ್ನೊ: ರಾಂಪುರ ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಘನಶ್ಯಾಮ್ ಲೋಧಿ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸಮಾಜವಾದಿ ಪಕ್ಷದ ಭದ್ರಕೋಟೆಯನ್ನು ಬಿಜೆಪಿ ವಶಪಡಿಸಿಕೊಂಡಿದೆ.
ತ್ರಿಪುರಾದಲ್ಲಿ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದಿದೆ.
ದಿಲ್ಲಿಯ ರಾಜಿಂದರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ದುರ್ಗೇಶ್ ಪಾಠಕ್ 11,000 ಮತಗಳಿಂದ ಗೆದ್ದಿದ್ದಾರೆ. ಎಎಪಿ ನಾಯಕ ರಾಘವ್ ಚಡ್ಡಾ ಅವರು ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆಯಾದ ನಂತರ ತನ್ನ ಸ್ಥಾನವನ್ನು ತೊರೆದ ಹಿನ್ನೆಲೆಯಲ್ಲಿ ಉಪಚುನಾವಣೆ ಅನಿವಾರ್ಯವಾಗಿತ್ತು.
ಅಝಂಗಢ ಲೋಕಸಭೆ ಉಪ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿ ದಿನೇಶ್ ಲಾಲ್ ಯಾದವ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್ ಅವರಿಗಿಂತ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಆಝಂಗಡ ಹಾಗೂ ರಾಂಪುರ ಎರಡೂ ಸ್ಥಾನಗಳು ಅಖಿಲೇಶ್ ಯಾದವ್ ನೇತೃತ್ವದ ಪಕ್ಷದ ಭದ್ರಕೋಟೆಗಳಾಗಿವೆ. ಮಾಜಿ ಮುಖ್ಯಮಂತ್ರಿ ಯಾದವ್ ರಾಜ್ಯ ವಿಧಾನಸಭೆಗೆ ಆಯ್ಕೆಯಾದ ನಂತರ ಅಝಂಗಡ ಸ್ಥಾನವನ್ನು ತೆರವುಗೊಳಿಸಿದರೆ, ರಾಂಪುರ ಸ್ಥಾನ ಪಕ್ಷದ ಪ್ರಮುಖ ನಾಯಕ ಅಝಂ ಖಾನ್ ಅವರಿಂದ ತೆರವಾಗಿತ್ತು.